ಸಾರಾಂಶ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿ.ಚುಂಚೇಗೌಡ, ಸದಸ್ಯರಾದ ಟಿ.ರಾಮಕೃಷ್ಣಯ್ಯ, ಅಂಜನಮೂರ್ತಿ, ವೆಂಕಟೇಶ್ ಅಪ್ಪಿ ಸೋಮವಾರ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಚುಂಚೇಗೌಡ, ದೊಡ್ಡಬಳ್ಳಾಪುರ ತಾಲೂಕು ಮತ್ತು ಸುತ್ತಮುತ್ತಲ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಪ್ರಾಧಿಕಾರದ ಮೂಲಕ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರು ಹಾಗೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರ ಒತ್ತಾಸೆಯಿಂದ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ರಚನೆಯಾಗಿತ್ತು. ಪ್ರಾಧಿಕಾರವು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕಾರ್ಯಗಳ ಅನುಷ್ಠಾನಕ್ಕೆ ಬದ್ದವಾಗಿದೆ. ಪ್ರಾಧಿಕಾರದ ಅಸ್ತಿತ್ವದಿಂದ ಬಹಳ ಮುಖ್ಯವಾಗಿ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕಳೆದ ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ, ಗ್ಯಾರೆಂಟಿ ಯೋಜನೆಗಳನ್ನು ಟೀಕಿಸುವ ಹಲವರಿಗೆ ನಮ್ಮ ಯೋಜನೆಗಳಿಂದ ಬಡಜನರು, ಕೂಲಿಕಾರ್ಮಿಕರು ಹಾಗೂ ರೈತರಿಗೆ ಬಹಳ ಉಪಯುಕ್ತವಾಗಿದೆ ಎಂಬುದರ ಅರಿವಾಗಬೇಕಿದೆ. ಬಿಜೆಪಿ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರಿಯಾಶೀಲತೆಗೆ ಉತ್ತಮ ಉದಾಹರಣೆ ಎಂದರು.ಈ ವೇಳೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಫೋಟೋ-
11ಕೆಡಿಬಿಪಿ7- ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿ.ಚುಂಚೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.