ಸಾರಾಂಶ
ರಾಜ್ಯ ಸರ್ಕಾರವು ಜಾತಿ ಗಣತಿಯನ್ನು ಶೀಘ್ರದಲ್ಲೇ ಸಚಿವ ಸಂಪುಟದ ಅನುಮೋದನೆ ಪಡೆದು ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮೈಸೂರು : ರಾಜ್ಯ ಸರ್ಕಾರದ ಮುಂದಿರುವ ಜಾತಿ ಗಣತಿಯನ್ನು ಶೀಘ್ರದಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು ಜಾರಿಗೊಳಿಸಲು ಕ್ರಮವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾ ಬಿಸಿಎಂ ವಿದ್ಯಾರ್ಥಿ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಎಲ್ಲಾ ಜಾತಿ, ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಅದನ್ನು ಜಾರಿಗೊಳಿಸುವ ಸಂಬಂಧ ಸದ್ಯದಲ್ಲಿಯೇ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಎಚ್. ಕಾಂತರಾಜು ಅಧ್ಯಕ್ಷತೆಯಲ್ಲಿ ರಚಿಸಲಾದ ಆಯೋಗವು ಈ ಸಮೀಕ್ಷೆ ನಡೆಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1931 ರಲ್ಲಿ ಜನಗಣತಿಯ ಜೊತೆಗೆ ಜಾತಿ ಗಣತಿಯೂ ಆಗಿತ್ತು. ಆದರೆ ವಿಶ್ವ ಯುದ್ಧ ನಡೆದದ್ದರಿಂದ ಜಾರಿ ಆಗಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕ ಈವರೆಗೂ ಜಾತಿ ಗಣತಿ ಮಾಡಿರಲಿಲ್ಲ. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಜಾತಿ ಗಣತಿ ಮಾಡಿಸಲಾಗಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಈಗಲೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ನಡೆಯಬೇಕಿದೆ. ಅದಕ್ಕಾಗಿ ವಿಶೇಷ ಸುಧಾರಣಾ ಕ್ರಮ ತೆಗೆದುಕೊಳ್ಳಬೇಕಿದೆ. ಈ ಕೆಲಸಕ್ಕೆ ಜಾತಿ ಗಣತಿಯೇ ಆಧಾರ ಎಂದು ಅವರು ಪ್ರತಿಪಾದಿಸಿದರು.
ಜಾತಿ ಗಣತಿ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸಿದ್ಧಾಂತದಂತೆ ಎಲ್ಲಾ ಸಮುದಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿ ತಿಳಿದುಕೊಳ್ಳಬೇಕಿದೆ. ಅದು ಜಾತಿ ಗಣತಿಯಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ಮುಂದಿನ ವರ್ಷದಿಂದ ರಾಜ್ಯದ ಪ್ರತಿ ಹೋಬಳಿಗೆ ಒಂದು ವಸತಿ ಶಾಲೆ ಕಡ್ಡಾಯವಾಗಿ ಇರಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ನಾನು ಉಪ ಮುಖ್ಯಮಂತ್ರಿ ಆಗಿದ್ದಾಗ 1994ರಲ್ಲಿ ತಾಲೂಕಿಗೊಂದು ಮೊರಾರ್ಜಿ ವಸತಿ ಶಾಲೆ ನಿರ್ಮಿಸಲಾಯಿತು. ಈಗ 822 ವಸತಿ ಶಾಲೆಗಳಿವೆ. 2024- 25ನೇ ಸಾಲಿನಲ್ಲಿ ಹೊಸದಾಗಿ 20 ವಸತಿ ಆರಂಭಿಸಲು ಮುಂದಿನ ವರ್ಷ ಪ್ರತಿ ಹೋಬಳಿಗೆ ವಸತಿ ಶಾಲೆ ನಿರ್ಮಿಸಿಕೊಟ್ಟು ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ತನ್ವೀರ ಸೇಠ್, ಸಿ. ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಬಿಡಿಎ ಆಯುಕ್ತ ಜಯರಾಮ್, ಸಂಘದ ಅಧ್ಯಕ್ಷ ಬಿ. ಶಿವಸ್ವಾಮಿ, ಗೌರವಾಧ್ಯಕ್ಷ ಎಂ. ರಾಮಯ್ಯ, ಕಾರ್ಯಾಧ್ಯಕ್ಷ ಡಾ. ಕುಮಾರ್, ಉಪಾಧ್ಯಕ್ಷ ಆರ್. ಮಹದೇವ, ಕಾರ್ಯದರ್ಶಿ ಬಿ.ಪಿ. ರಾಜೇಶ, ಖಜಾಂಚಿ ಕೆ. ರುಕ್ಮಾಂಗದ, ಜಂಟಿ ಕಾರ್ಯದರ್ಶಿ ಜೆ.ಕೆ. ರಮೇಶ್ ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಜವರಪ್ಪ, ಡಾ.ಜಿ.ಎನ್. ಬಸವರಾಜು, ಎನ್. ಮುತ್ತ, ಜೆ. ಮಂಜುನಾಥ್, ಸಿ. ನಿರಂಜನ ಕುಮಾರ್, ಎಂ. ಬಸವರಾಜು, ಲೋಹಿತ್, ಚೌಡೇಗೌಡ, ಎನ್. ನಾಗರಾಜು, ಯೋಗೇಶ್, ರಾಹುಲ್ ಬಂತಿ, ಡಾ.ಕೆ. ಬಸವರಾಜು, ಬೀರಪ್ಪ, ಮಹದೇವ ಪ್ರಸಾದ್, ಪಿ.ಎನ್. ದೇವೇಗೌಡ, ಪಿ.ಎಸ್. ರಘು, ಮಲ್ಲೇಗೌಡ, ಸೈಯದ್ ಮುಜಾಹಿದ್, ಎಚ್. ಹಾಲಪ್ಪ, ಎಸ್. ಗೌರೀಶ್, ಕೆ.ಎಂ. ಮಹೇಶ್, ಎಚ್. ಕೃಷ್ಣನಾಯಕ, ಎಸ್.ಎಂ. ಮಧುಸೂದನ, ಸುಹೇಲ್ ಅಹಮದ್ ಮೊದಲಾದವರು ಇದ್ದರು.