ಗೋಣಿಕೊಪ್ಪ ಸಂತ ಥಾಮಸ್ ಶಾಲೆ ವಿದ್ಯಾರ್ಥಿ ಸಂಘದ ಉದ್ಘಾಟನೆ

| Published : Jul 11 2024, 01:31 AM IST

ಸಾರಾಂಶ

ಗೋಣಿಕೊಪ್ಪ ಸಂತ ಥಾಮಸ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ವಿದ್ಯಾರ್ಥಿಗಳು ಜೀವನದಲ್ಲಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯ ಅಳವಡಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕೆಂದು ಸಾಹಿತಿ, ಸಮಾಜ ಸೇವಕ ರಜಿತ ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಗೋಣಿಕೊಪ್ಪ ಸಂತ ಥಾಮಸ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಮತ್ತು ಅವರನ್ನು ರೂಪಿಸಿದ ಶಾಲೆಯನ್ನು ನೆನಪಿಸಿಕೊಳ್ಳಬೇಕು. ಉತ್ತಮ ನಾಗರಿಕರಾಗಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಅನುವು ಮಾಡಿಕೊಡುವ ಗುಣಾತ್ಮಕ ಶಿಕ್ಷಣಕ್ಕಾಗಿ ಶ್ರಮಿಸಬೇಕು ಎಂದರು.

ವಿದ್ಯೆ ಕದಿಯಲಾಗದ ಸಂಪತ್ತು, ವಿದ್ಯಾವಂತರು ದೇಶಕ್ಕೆ ಆಸ್ತಿಯಾಗಬೇಕು. ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗುವುದು ಹಾಗೂ ಓದುವಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಫಾ. ಆಂಟೋಣಿ ಪಯ್ಯಪ್ಪಳ್ಳಿ ಮಾತನಾಡಿ, ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು, ವಿದ್ಯಾರ್ಥಿಗಳಿಗೆ ಸಿಗಬೇಕಿದೆ ಎಂದರು.

ಶಾಲಾ ನಾಯಕರಾಗಿ ಮುಫಿದ್ ಎಂ.ಆರ್. ನುಹಾ ಫಾತೀಮ, ಕ್ರೀಡಾ ನಾಯಕರಾಗಿ ಬಿಲಾಲ್ ಬಿ.ಎಸ್., ಸಿಯೋನ ಸುನಿಲ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ನಾಯಕರಾಗಿ ನಿಷಾದ್ ಪಿ.ಬಿ., ಹೃಷಿಕಾ ಬಿ.ಎಸ್. ಆಯ್ಕೆಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಶಾಲೆಯ ಅಧ್ಯಕ್ಷ ಫಾ. ಕೆ.ಎಫ್ ಥಾಮಸ್ ಕೆಳಪ್ಪುರ ಅವರು ಎಲ್‌ಕೆ.ಜಿ ಯಿಂದ 10 ನೇ ತರಗತಿವರೆಗಿನ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಮತ್ತು ಶಾಲೆಗೆ ನೂತನವಾಗಿ ಕರ್ತವ್ಯ ನಿರ್ವಹಿಸಲು ಆಗಮಿಸಿದ ಶಿಕ್ಷಕರನ್ನು ಹೂಗುಚ್ಛ ನೀಡುವುದರ ಮೂಲಕ ಸ್ವಾಗತಿಸಿದರು.

ಕಾರ್ಯಕ್ರಮದ ಮಾರ್ಗದರ್ಶಕರಾಗಿ ಕುಮುದ, ಕ್ರೀಡಾ ಶಿಕ್ಷಕ ಶಯನ್ ಮತ್ತು ವಿನಿತಾ ಜೆನಿಫರ್ ಕಾರ್ಯನಿರ್ವಹಿಸಿದರು.

ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.