ಸಾರಾಂಶ
ಆ.೧೯ರಂದು ಪುತ್ತೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ನೂತನ ಕಚೇರಿ ಉದ್ಘಾಟನೆಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೊಂದು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಮಿತಿ ನೇಮಕ ಮಾಡಲಾಗಿದೆ. ಆ.೧೯ರಂದು ಪುತ್ತೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ನೂತನ ಕಚೇರಿ ಉದ್ಘಾಟನೆಗೊಳ್ಳಲಿದೆ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದರು.ಅವರು ಶನಿವಾರ ಕಚೇರಿ ಉದ್ಘಾಟನೆಯ ಪೂರ್ವಭಾವಿಯಾಗಿ ಪುತ್ತೂರು ತಾಲೂಕು ಪಂಚಾಯಿತಿ ಕಿರು ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ನೂತನ ಕಚೇರಿಯನ್ನು ಶಾಸಕ ಅಶೋಕ್‌ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಸಹಿತ ವಿವಿಧ ಮುಖಂಡರು ಭಾಗಿಯಾಗಲಿದ್ದಾರೆ ಎಂದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಕಾರ್ಯದರ್ಶಿಯಾದ ನವೀನ್‌ಕುಮಾರ್ ಭಂಡಾರಿ ಮಾತನಾಡಿ ಈ ಸಮಿತಿಯಲ್ಲಿ ಅಧ್ಯಕ್ಷರನ್ನು ಹೊರತು ಪಡಿಸಿ ಸದಸ್ಯರಾಗಿ ಶಿವನಾಥ ರೈ ಸರ್ವೆ, ಸಂತೋಷ್ ಭಂಡಾರಿ ಸಿಎಚ್ ಒಳಮೊಗ್ರು, ಸೇಸಪ್ಪ ನೆಕ್ಕಿಲು ಹಿರೇಬಂಡಾಡಿ, ತಾರಾನಾಥ ನುಳಿಯಾಲು ನಿಡ್ಪಳ್ಳಿ, ಮಹಮ್ಮದ್ ಫಾರೂಕ್ ಪೆರ್ನೆ, ಬಬಿತಾ ಅಳಿಕೆ, ವಿಜಯಲಕ್ಷ್ಮಿ ಕೋಡಿಂಬಾಡಿ, ಎಡ್ವರ್ಡ್ ಮೈಕಲ್ ಡಿಸೋಜ ಅಮ್ಚಿನಡ್ಕ, ಅಶೋಕ್ ಪೂಜಾರಿ ಬೊಳ್ಳಾಡಿ, ಹುಸೈನ್ ವಿಟ್ಲ, ಧೀರಜ್ ಗೌಡ ಕೊಡಿಪ್ಪಾಡಿ, ವಿಶ್ವಜಿತ್ ಅಮ್ಮುಂಜೆ ಕುರಿಯ, ಶೀನಪ್ಪ ಪೂಜಾರಿ ಪಡ್ನೂರು ಮತ್ತು ಆಸ್ಮಾ ಉಮರ್ ಕೆದಂಬಾಡಿ ಸದಸ್ಯರಾಗಿರುತ್ತಾರೆ. ಈ ಸಮಿತಿ ತಿಂಗಳಲ್ಲಿ ಎರಡು ಬಾರಿ ಸಭೆ ನಡೆಸಬೇಕಿದ್ದು, ಗ್ಯಾರಂಟಿ ಯೋಜನೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿದೆ ಎಂದು ಮಾಹಿತಿ ನೀಡಿದರು.