ಸಾರಾಂಶ
ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಶಾಸಕರು ೪೦ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿರುವುದರಿಂದ ಅಭಿವೃಧ್ದಿ ಕಾಮಗಾರಿಗಳು ಎಷ್ಟರಮಟ್ಟಿಗೆ ಗುಣಾತ್ಮಕವಾಗಬಲ್ಲವು ಎಂಬುದನ್ನು ಕ್ಷೇತ್ರದ ಜನತೆ ಅರಿತಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಶಾಸಕ ನೇಮರಾಜನಾಯ್ಕ ವಿರುದ್ಧ ಕಿಡಿಕಾರಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಪದವಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ವರ್ಷದಿಂದಲೂ ಹಲವು ಭವನಗಳಿಗೆ ಅನುದಾನ ಒದಗಿಸುವುದಾಗಿ ಶಾಸಕ ನೀಡಿದ ಭರವಸೆ ಹುಸಿಯಾಗಿದೆ. ಈ ಹಿಂದೆ ಪುರಸಭೆಗೆ ೪.೧೪ ಕೋಟಿ ರೂ.ಅನುದಾನ ಕಾಯ್ದಿರಿಸಲಾಗಿತ್ತು. ಪಟ್ಟಣದ ಹಳೇಯ ತಹಶೀಲ್ದಾರ್ ಕಚೇರಿ ನೆಲಸಮಗೊಳಿಸಿ ಪುರಸಭೆ ಕಚೇರಿ ನಿರ್ಮಿಸಲು ಸಿದ್ಧತೆ ನಡೆಸಲಾಗಿತ್ತು. ಕಚೇರಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಒದಗಿಸುವಂತೆ ಸಚಿವರನ್ನು ಕೋರಲಾಗುವುದು ಎಂದರು.ವಿಧಾನಸಭೆ ಚುನಾವಣೆಯಲ್ಲಿ ಕಣ್ಣೀರನ್ನು ಒರೆಸಿದ ಮುಖಂಡರು ಇದೀಗ ಕಣ್ಣೀರು ಹಾಕುವಂತಾಗಿದೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದವರು ಕೇವಲ ಕಣ್ಣೀರನ್ನು ಬಂಡವಾಳವಾಗಿಸಿಕೊಂಡು ಶಾಸಕರಾದರು. ಅವರ ಕಣ್ಣೀರು ಒರೆಸಿದ ಮುಖಂಡರು ಯಾವುದೇ ಆಸರೆ ಇಲ್ಲದೆ ಇದೀಗ ಕಣ್ಣೀರು ಹಾಕುವಂತಾಗಿದೆ. ಜನರು ಎಚ್ಚೆತ್ತುಕೊಂಡಿದ್ದು, ಇಂದಿನ ಮತ್ತು ಹಿಂದಿನ ಅವಯ ಅಭಿವೃದ್ಧಿ ಕಾರ್ಯಗಳ ತುಲನೆ ಮಾಡುತ್ತಾರೆ.
ಪುರಸಭೆಯ ವಾರ್ಡ್ಗಳಿಗೆ ವಿಶೇಷ ಅನುದಾನದ ಅಗತ್ಯವಿದ್ದರೆ ಸಿಎಂ ಮತ್ತು ಪೌರಾಡಳಿತ ಸಚಿವರ ಬಳಿ ನಿಯೋಗ ಕರೆದೊಯ್ದು ಅಗತ್ಯ ಅನುದಾನ ಒದಗಿಸಲಾಗುವುದು. ಪಕ್ಷಭೇದವಿಲ್ಲದೆ ಪುರಸಭೆಯ ಎಲ್ಲ ಸದಸ್ಯರ ಸಹಮತದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸೂಚನೆ ನೀಡಿದರು. ಪಟ್ಟಣದ ರಾಮನಗರ ರಸ್ತೆ ಅಭಿವೃದ್ಧಿ ಕುರಿತಂತೆ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದರು.ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಮಾತನಾಡಿ, ಕೆಎಂಎಫ್ ಅಧ್ಯಕ್ಷರ ಸಹಕಾರದಿಂದ ಪುರಸಭೆ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ್ದು, ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃಧ್ದಿಗೆ ಆಧ್ಯತೆ ನೀಡಲಾಗುವುದು. ಮೂಲ ಸೌಲಭ್ಯ ಒದಗಿಸಲು ಅಗತ್ಯ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಪಕ್ಷಾತೀತವಾಗಿ ಪಟ್ಟಣದ ೨೩ವಾರ್ಡ್ಗಳಿಗೆ ಆಧ್ಯತೆ ನೀಡಲಾಗುವುದು ಎಂದರು.
ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಸದಸ್ಯರಾದ ಮಂಜುಳಾ ಕೃಷ್ಣನಾಯ್ಕ, ಅಜೀಜುಲ್ಲಾ, ರಾಜೇಶ್ ಬ್ಯಾಡಗಿ, ವೀರಣ್ಣ, ಸರಸ್ವತಿ ಜಿ.ಹನುಮಂತಪ್ಪ, ಪವಾಡಿ ಹನುಮಂತಪ್ಪ, ಮಂಜುನಾಥ, ತ್ಯಾವಣಗಿ ಕೊಟ್ರೇಶ, ಬಾಳಪ್ಪ, ಕೆಜಿಎನ್ ದಾದು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಸಾಹಿರಾಬಾನು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಜಿ.ಪಂ.ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ರೋಗಾಣಿ ಹುಲುಗಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಚ್.ಎಂ.ನೂರಿ, ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ, ಪ್ರಭಾಕರ ಇತರರಿದ್ದರು.ಹಗರಿಬೊಮ್ಮನಹಳ್ಳಿ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಮರಿರಾಮಣ್ಣ ಉಪಾಧ್ಯಕ್ಷರಾಗಿ ಅಂಬಿಕಾ ದೇವೇಂದ್ರಪ್ಪ ಪದವಿ ಸ್ವೀಕರಿಸಿದರು. ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ಇದ್ದರು.