ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವಯೋವೃದ್ಧರನ್ನು ಗೌರವದಿಂದ ಕಾಣಬೇಕು. ಸ್ವಾವಲಂಬಿ ಮತ್ತು ಸ್ವತಂತ್ರವಾದ ಜೀವನ ನಡೆಸಬೇಕು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ತಿಳಿಸಿದರು.ನಗರದ ಜೆಎಸ್ಎಸ್ ಆಸ್ಪತ್ರೆಯ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿ ಜೆಎಸ್ಎಸ್ ವಯ ವಿಕಾಸ ಸಂಪರ್ಕ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, 60 ವರ್ಷ ಮೇಲ್ಪಟ್ಟ ವಯೋವೃದ್ಧರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದು ಎಂದರು.ಜೆಎಸ್ಎಸ್ ವಯ ವಿಕಾಸ ಕೇಂದ್ರದಲ್ಲಿ ವಯೋವೃದ್ಧರು ಸ್ವಾವಲಂಬಿ ಮತ್ತು ಸ್ವಾತಂತ್ರ್ಯದಿಂದ ಬದುಕಲು ತರಬೇತಿ ಮತ್ತು ಮಾಹಿತಿಯನ್ನು ನೀಡಲಾಗುತ್ತದೆ. ನಿವೃತ್ತಿಯ ನಂತರ ವೃದ್ಧರು ಸಮಾಜದೊಂದಿಗೆ ಬೆರೆಯಲು, ಗೌರವಯುತವಾದ ಜೀವನ ನಡೆಸಲು ಅವರಿಗೆ ಬೇಕಾಗುವ ಕೌಶಲ್ಯ ತರಬೇತಿ, ಆರೋಗ್ಯದ ಕಾಳಜಿ ಹಾಗೂ ಹಿರಿಯರಿಗೆ ಸಿಗುವ ಸರ್ಕಾರದ ಸೌಲಭ್ಯಗಳ ಬಗ್ಗೆ ಇಲ್ಲಿ ತಿಳಿಸಲಾಗುತ್ತದೆ ಎಂದು ಅವರು ಹೇಳಿದರು.ಅಂಕಿ ಅಂಶಗಳ ಪ್ರಕಾರ ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಶೇ.12 ಜನರು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದಾರೆ. ಇದು 2030ಕ್ಕೆ ಇನ್ನೂ ಹೆಚ್ಚಾಗಬಹುದು. ಇಂದಿಗೂ ನಮ್ಮ ದೇಶದಲ್ಲಿ ಹಿರಿಯ ನಾಗರಿಕರಿಗೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಜಾಗೃತಿಯ ಕೊರತೆ ಇದೆ. ಇದನ್ನು ಮನಗಂಡು ಇದರ ಸೌಲಭ್ಯ ಹಿರಿಯರಿಗೆ ಸಿಗಲಿ ಎಂಬ ಉದ್ದೇಶದಿಂದ ಜೆಎಸ್ಎಸ್ ಸಂಸ್ಥೆಯು ವಯ ವಿಕಾಸ ಸಂಪರ್ಕ ಕೇಂದ್ರವನ್ನು ತೆರೆದಿದೆ. ಇದರ ಜೊತೆಗೆ ಸರ್ಕಾರದ ಹಿರಿಯ ನಾಗರಿಕರ ಸಹಾಯವಾಣಿಯು ಆಸ್ಪತ್ರೆ ಆವರಣದಲ್ಲಿ ಈಗಾಗಲೇ ಇದ್ದು, ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಇನ್ಫೋಸಿಸ್ತರಬೇತಿ ಮತ್ತು ಮೌಲ್ಯಮಾಪನ ಶಿಕ್ಷಣ ವಿಭಾಗದ ಮುಖ್ಯಸ್ಥ ತಿರುಮಲ ಆರೋಹಿ ಮಾಮುನೂರು ಮಾತನಾಡಿ, ಜೆಎಸ್ಎಸ್ ಸಂಸ್ಥೆ ಮತ್ತು ವಯ ವಿಕಾಸ ಸಂಸ್ಥೆಯವರು ಹಿರಿಯ ನಾಗರಿಕರಿಗೆ ಭೌತಿಕ, ಸಾಮಾಜಿಕ ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಜಾಗೃತಿ ಮತ್ತು ಮಾಹಿತಿಯನ್ನು ನೀಡಲು ಸಂಪರ್ಕ ಕೇಂದ್ರವನ್ನು ಸ್ಥಾಪಿಸಿರುವುದು ಸಂತೋಷದ ಸಂಗತಿ. ಈ ಸೌಲಭ್ಯ ಎಲ್ಲಾ ನಾಗರಿಕರಿಗೂ ಸಿಗಬೇಕು. ಇನ್ನೂ ಹೆಚ್ಚಿನ ನೂಡಲ್ ಕೇಂದ್ರಗಳು ಸ್ಥಾಪನೆಯಾಗಬೇಕು. ಇದಕ್ಕೆ ನಮ್ಮ ಇನ್ಫೋಸಿಸ್ ಸಂಸ್ಥೆಯ ಬೆಂಬಲವಿದೆ ಎಂದು ತಿಳಿಸಿದರು.ನಾರಾಯಣ ಹೆಲ್ತ್ಕ್ಲಸ್ಟರ್ ಮತ್ತು ಕಾರ್ಪೋರೇಟ್ ವಿಭಾಗದ ನಿರ್ದೇಶಕ ಡಾ. ವಿಜಯಸಿಂಗ್, ಕೆನರಾ ಬ್ಯಾಂಕ್ ಸಹಾಯಕ ಜನರಲ್ ಮ್ಯಾನೇಜರ್ ಚಂದನ್ ಕುಮಾರ್ ಚೌಧರಿ, ಜೆಎಸ್ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ವಯ ವಿಕಾಸ ಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕವಿತಾ ರೆಡ್ಡಿ, ಜೆಎಸ್ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ. ಮಧು, ವೃದ್ಧಾರೋಗ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರತಿಭಾ ಪರೇರ, ಸಹ ಪ್ರಾಧ್ಯಾಪಕಿ ಡಾ. ಶಿಲ್ಪಾ ಅವರೆಬೀಳ್ ಮೊದಲಾದವರು ಇದ್ದರು. ಡಾ.ಸಿ.ಜೆ. ತೇಜಸ್ವಿನಿ ವಂದಿಸಿದರು. ಡಾ. ಅಶ್ರಿತಾ ನಿರೂಪಿಸಿದರು.