ಕಡಿಮೆ ದರದಲ್ಲಿ ಮದುವೆ, ಉಡದಟ್ಟಿ, ಉಡಿ ತುಂಬುವ ಕಾರ್ಯಕ್ರಮ ಸೇರಿ ಇನ್ನಿತರ ಕಲ್ಯಾಣ ಕಾರ್ಯಕ್ರಮ ಮಾಡಲು ತಾಲೂಕಿನ ಮಂಟೂರು ಗ್ರಾಮದ ಸಿದ್ಧಾರೂಢ ಬೃಹನ್ಮಠದಲ್ಲಿ ಕಾಶಿ ವಿಶ್ವನಾಥ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ ಎಂದು ಮಂಟೂರಿನ ಸಿದ್ಧಾರೂಢ ಬೃಹನ್ಮಠದ ಸದಾನಂದ ಸ್ವಾಮೀಜಿ ತಿಳಿಸಿದರು.

ಕನ್ನಡ ಪ್ರಭವಾರ್ತೆ ಮುಧೋಳ

ಕಡಿಮೆ ದರದಲ್ಲಿ ಮದುವೆ, ಉಡದಟ್ಟಿ, ಉಡಿ ತುಂಬುವ ಕಾರ್ಯಕ್ರಮ ಸೇರಿ ಇನ್ನಿತರ ಕಲ್ಯಾಣ ಕಾರ್ಯಕ್ರಮ ಮಾಡಲು ತಾಲೂಕಿನ ಮಂಟೂರು ಗ್ರಾಮದ ಸಿದ್ಧಾರೂಢ ಬೃಹನ್ಮಠದಲ್ಲಿ ಕಾಶಿ ವಿಶ್ವನಾಥ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ ಎಂದು ಮಂಟೂರಿನ ಸಿದ್ಧಾರೂಢ ಬೃಹನ್ಮಠದ ಸದಾನಂದ ಸ್ವಾಮೀಜಿ ತಿಳಿಸಿದರು.

ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ದೊರೆಯಲು ಕಲ್ಯಾಣ ಮಂಟಪ ನಿರ್ಮಿಸಬೇಕೆಂಬ ಸದುದ್ದೇಶದಿಂದ ಶ್ರೀಮಠದ ಭಕ್ತರ ಸಹಾಯ ಸಹಕಾರದಿಂದ ₹4 ಕೋಟಿ ವೆಚ್ಚದಲ್ಲಿ ಹೈಟೆಕ್ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಸಕಲ ಸೌಲಭ್ಯಗಳಿಂದ ಕೂಡಿದ ಹೈಟೆಕ್ ಭವನ ಇದಾಗಿದ್ದು, ವಿಶಾಲ ಸಭಾಂಗಣ, ಉತ್ಕೃಷ್ಟ ಅಡುಗೆ ಮನೆ, ಬಹುದೊಡ್ಡ ಊಟದ ಹಾಲ್, ಶುದ್ಧ ಕುಡಿಯುವ ನೀರಿನ ಸೌಲಭ್ಯ, ವಿಐಪಿ ಊಟದ ಪ್ರತ್ಯೇಕ ವ್ಯವಸ್ಥೆ, ಎಸಿ ಮತ್ತು ನಾನ್ ಎಸಿ ರೂಮ್‌ಗಳು ಹಾಗೂ ಬಹುದೊಡ್ಡ ಪಾರ್ಕಿಂಗ್ ವ್ಯವಸ್ಥೆ ಇಲ್ಲಿವೆ ಎಂದು ತಿಳಿಸಿದರು.

14ರಂದು ಉದ್ಘಾಟನೆ:ನ.14ರಂದು ಬೆಳಗ್ಗೆ 10ಗಂಟೆಗೆ ಇಂಚಲ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಂಟೂರಿನಲ್ಲಿ ನಿರ್ಮಿಸಲಾದ ಕಾಶಿ ವಿಶ್ವನಾಥ ಕಲ್ಯಾಣ ಮಂಟಪವನ್ನು ಬೀದರ್‌ ಚಿದಂಬರ ಆಶ್ರಮದ ಡಾ.ಶಿವಕುಮಾರ ಸ್ವಾಮೀಜಿ ಉದ್ಘಾಟಿಸುವರು, ಮಂಟೂರ ಸಿದ್ಧಾರೂಢ ಬೃಹನ್ಮಠದ ಸದಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ವಿಜಯಪುರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ಸ್ವಾಮೀಜಿ, ಹುಣಶ್ಯಾಳ ಕೈವಲ್ಯಾಶ್ರಮದ ನಿಜಗುಣ ದೇವರು, ಮುಧೋಳ ಸಿದ್ಧಾರೂಢ ಮಠದ ಸಿದ್ಧರಾಮ ಸ್ವಾಮೀಜಿ, ಅನವಾಲದ ಕೈಲಾಸಪತಿ ಸ್ವಾಮೀಜಿ ಉಪಸ್ಥಿತರಿರುವರು.

ನ.14ರ ಬೆಳಗ್ಗೆ 9.30ಕ್ಕೆ ಮಂಟೂರ ಗ್ರಾಮದ ಚಂದ್ರಗಿರಿ ದೇವಸ್ಥಾನದಿಂದ ಕಲ್ಯಾಣ ಮಂಟಪದವರೆಗೆ 108 ಕುಂಭದೊಂದಿಗೆ ಸಮಂಗಲೆಯರಿಂದ ಆರತಿ, ವಿವಿಧ ವಾದ್ಯಮೇಳದೊಂದಿಗೆ ಡಾ.ಶಿವಾನಂದ ಭಾರತಿ ಸ್ವಾಮೀಜಿ, ಡಾ.ಶಿವಕುಮಾರ ಸ್ವಾಮೀಜಿ ಹಾಗೂ ಸದಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾಶಿ ವಿಶ್ವನಾಥ ಕಲ್ಯಾಣ ಮಂಟಪದವರೆಗೆ ಸದ್ಗುರು ಸಿದ್ಧಾರೂಢರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಶ್ರೀಮಠದ ಭಕ್ತರಾದ ಎಚ್.ಎಲ್. ಮೆಟಗುಡ್ಡ, ಎಸ್.ಎಚ್.ಗಣಾಚಾರಿ, ಎಲ್.ಆರ್.ಉದಪುಡಿ, ಪಾಂಡು ಹಲಗಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.