ಉಡುಪಿ: ಇಲ್ಲಿನ ಕಿನ್ನಿಮುಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆ ಬುಧವಾರ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿದಿಯೂರು ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 3.30ಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೂತನ ಶಾಖೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಉಡುಪಿ ಶ್ಯಾಮಿಲಿ ಸಮೂಹ ಸಂಸ್ಥೆಯ ಪ್ರವರ್ತಕ ಡಾ. ಜಿ. ಶಂಕರ್, ಬೆಂಗಳೂರು ಎಂ.ಆರ್.ಜಿ. ಗ್ರೂಪ್‌ನ ಡಾ. ಕೆ. ಪ್ರಕಾಶ್ ಶೆಟ್ಟಿ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶಾಸಕರಾದ ಯಶ್‌ಪಾಲ್ ಸುವರ್ಣ, ಸುನಿಲ್ ಕುಮಾರ್, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ್ ಗಂಟೆಹೊಳೆ, ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ಹಾಗೂ ಬಿಜೆಪಿ ನಿಕಟ ಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಿರಿಯ ಸಹಕಾರಿ ಧುರೀಣ ಟಿ. ಶಂಭು ಶೆಟ್ಟಿ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸದ್ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿರುತ್ತಾರೆ ಎಂದರು.

ಉದ್ಘಾಟನೆ ಪ್ರಯುಕ್ತ ಸಂಸ್ಥೆಯಲ್ಲಿ 1ರಿಂದ 2 ವರ್ಷದೊಳಗಿನ ಫಿಕ್ಸ್ ಡೆಪಾಸಿಟ್‌ಗಳಿಗೆ ಶೇ. 11 ಬಡ್ಡಿ ದರ ನೀಡಲಾಗುವುದು. ಉಳಿದಂತೆ 90ರಿಂದ 180 ದಿನಗಳವರೆಗೆ ಶೇ.5, 181 ದಿನಗಳಿಂದ ಒಂದು ವರ್ಷದೊಳಗೆ ಶೇ.7.5, 1 ವರ್ಷದಿಂದ 2 ವರ್ಷದೊಳಗೆ ಶೇ. 9 ಹಾಗೂ 2 ವರ್ಷದಿಂದ 5 ವರ್ಷದೊಳಗೆ ಶೇ. 9.5 ಬಡ್ಡಿ ದರ ನೀಡಲಾಗುತ್ತದೆ ಎಂದು ಉದಯ ಕುಮಾರ್ ಶೆಟ್ಟಿ ತಿಳಿಸಿದರು.ಉಪಾಧ್ಯಕ್ಷೆ ಪ್ರಣೀತ ಶರದ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಿತಾ, ನಿರ್ದೇಶಕರಾದ ಸುಧಾಕರ್ ಹೆಗ್ಡೆ ಹಾಗೂ ಉಮೇಶ್ ನಾಯರಿ ಇದ್ದರು.