ಸಾರಾಂಶ
ಗರಗಂದೂರು ಬಿ ಗ್ರಾಮದ ಹೊಸತೋಟದ ಪ್ರಯಾಣಿಕರ ತಂಗುದಾಣವನ್ನು ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘ ಮತ್ತು ಹರದೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗರಗಂದೂರು ಬಿ ಗ್ರಾಮದ ಹೊಸತೋಟದ ಪ್ರಯಾಣಿಕರ ತಂಗುದಾಣವನ್ನು ಮಂಗಳವಾರ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.ನಂತರ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಹೋಂ ಸ್ಟೇ ಮತ್ತು ಪ್ರವಾಸೋದ್ಯಮ ಸಂಘ ಮಾಡುತ್ತಿದೆ. ಸುಸಜ್ಜಿತ ತಂಗುದಾಣವನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡುತ್ತಿದೆ. ಪ್ರವಾಸಿ ಜಿಲ್ಲೆ ಕೊಡಗಿಗೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ವ್ಯಾಪಾರೋದ್ಯಮ ಬೆಳೆಯುತ್ತಿದೆ. ಆದರೆ, ಸಂಘವು ಕೇವಲ ಲಾಭದ ದೃಷ್ಟಿಯಿಂದ ಮಾತ್ರ ಯೋಚಿಸದೆ, ಪ್ರವಾಸಿಗರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವಾದಲ್ಲಿ, ಪ್ರವಾಸಿ ತಾಣಗಳೂ ಸ್ವಚ್ಛತೆಯಿಂದ ಇರಲು ಸಾಧ್ಯ. ತಂಗುದಾಣಗಳ ನಿರ್ವಹಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಿದೆ. ಅದಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿದಲ್ಲಿ ಯಾವುದೇ ಅನಾಚಾರಗಳು ನಡೆಯುವುದಿಲ್ಲ. ಅದನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳು ಮಾಡಬೇಕಿದೆ ಎಂದರು.
ಇದೇ ಸಂದರ್ಭ ಗರಗಂದೂರು ಕಾಫಿ ತೋಟದ ಡಿ.ಸುರೇಶ್ ದಾಸಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಹೋಂಸ್ಟೇ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸಿ.ಕೆ. ರೋಹಿತ್, ಗರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಎ. ಬೋಜಮ್ಮ, ಸದಸ್ಯ ಸಲೀಂ, ಸಂಘದ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಎಸ್.ಎಲ್. ಅಭಿನಂದ್ ಹಾಗು ಖಜಾಂಚಿ ಡಿ.ಪಿ. ಪ್ರೀತಮ್ ಇದ್ದರು.