ಚನ್ನರಾಯಪಟ್ಟಣದಲ್ಲಿ ನೂತನ ಶ್ರೀ ಲಕ್ಷ್ಮಿದೇವಿ ದೇಗುಲದ ಉದ್ಘಾಟನೆ

| Published : May 18 2024, 12:36 AM IST

ಚನ್ನರಾಯಪಟ್ಟಣದಲ್ಲಿ ನೂತನ ಶ್ರೀ ಲಕ್ಷ್ಮಿದೇವಿ ದೇಗುಲದ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣದ ತಾಲೂಕಿನ ಕಸಬಾ ಹೋಬಳಿಯ ಡಿ.ಕಾಳೇನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿದೇವಿ ಅಮ್ಮನ ಜೀರ್ಣೋದ್ಧಾರಗೊಂಡ ನೂತನ ದೇವಾಲಯದಲ್ಲಿ ಅಮ್ಮನ ನೂತನ ವಿಗ್ರಹ ಪ್ರತಿಷ್ಠಾಪನೆ, ನೂತನ ಶಿಖರ ಗೋಪುರದ ಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವಗಳು ಅತ್ಯಂತ ವಿಜೃಂಭಣೆಯಿಂದ ನಡೆದವು.

ಡಿ.ಕಾಳೇನಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಮಂದಿರ । ನೂತನ ವಿಗ್ರಹ, ಕಳಶ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಕಸಬಾ ಹೋಬಳಿಯ ಡಿ.ಕಾಳೇನಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿದೇವಿ ಅಮ್ಮನ ಜೀರ್ಣೋದ್ಧಾರಗೊಂಡ ನೂತನ ದೇವಾಲಯದಲ್ಲಿ ಅಮ್ಮನ ನೂತನ ವಿಗ್ರಹ ಪ್ರತಿಷ್ಠಾಪನೆ, ನೂತನ ಶಿಖರ ಗೋಪುರದ ಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವಗಳು ಅತ್ಯಂತ ವಿಜೃಂಭಣೆಯಿಂದ ನಡೆದವು.

ಡಿ.ಕಾಳೇನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀಲಕ್ಷ್ಮಿದೇವಿ ಅಮ್ಮನ ದೇವಸ್ಥಾನವು ಶತಮಾನಗಳಷ್ಟು ಹಳೆಯದಾಗಿ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇರಿ ಜೀರ್ಣೋದ್ದಾರಗೊಳಿಸಿದ ನೂತನ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ, ಶಿಖರ ಗೋಪುರ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಕಳೆದ ಬುಧವಾರದಿಂದ ಆರಂಭವಾಗಿ ಮೂರು ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದು ಶುಕ್ರವಾರ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.

ಲೋಕಾರ್ಪಣೆ ಸಲುವಾಗಿ ನಡೆಸಲಾದ ಧಾರ್ಮಿಕ ಕಾರ್ಯಕ್ರಮಗಳ ಪೈಕಿ ಮೊದಲ ದಿನ ಬುಧವಾರ ಲಕ್ಷ್ಮಿದೇವಿಯ ನೂತನ ವಿಗ್ರಹವನ್ನು ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಿಂದ ವಾದ್ಯಗೋಷ್ಠಿಯೊಂದಿಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ತಂದು ಡಿ.ಕಾಳೇನಹಳ್ಳಿ ಪುರಪ್ರವೇಶ ಮಾಡಿಸಿ, ನಂತರ ಅಮ್ಮನವರನ್ನು ಧಾನ್ಯದ ಮೇಲೆ ಕೂರಿಸಿ, ಪೂಜೆ, ಮಹಾಮಂಗಳಾರತಿ ಸಲ್ಲಿಸಲಾಯಿತು. ಗುರುವಾರ ಬೆಳಿಗ್ಗೆ ಕಳಸ ಸ್ಥಾಪನೆ, ನವಗ್ರಹ ಸ್ಥಾಪನೆ, ಮಹಾಗಣಪತಿ ಪೂಜೆ, ಪುಣ್ಯಾಂಗ ದೇವಾಲಯ ಬಿಂಬಶುದ್ಧಿ ಹೋಮ ನಡೆಸಿ, ದೇವಸ್ಥಾನಕ್ಕೆ ದಿಗ್ಬಂಂಧನ ಹಾಕಲಾಯಿತು.

ಸಂಜೆ, ಪ್ರಾಕಾರ ಹೋಮ, ರಾಕ್ಷಘ್ನ ಹೋಮ, ಕಳಾಕರ್ಷಣೆ ಅಧಿವಾಸಪೂಜಾ, ಅಷ್ಟಬಂಧನ, ಪೂರ್ವಕ ದೇವಿಯರ ವಿಗ್ರಹ ಸ್ಥಾಪನೆ ನೆರವೇರಿಸಲಾಯಿತು. ತರುವಾಯ ಗ್ರಾಮದ ಮುತ್ತೈದೆಯರು ೧೦೮ ಕಳಶಗಳನ್ನು ಹೊತ್ತು, ವಾದ್ಯಸಹಿತ ಶ್ರೀ ಲಕ್ಷ್ಮಿದೇವಿ, ತಗ್ಯಮ್ಮದೇವಿಯರ ಉತ್ಸವ ಮೂರ್ತಿಯೊಂದಿಗೆ ದೇವಸ್ಥಾನದ ಆವರಣಕ್ಕೆ ಆಗಮಿಸಿದರು.

ವಿಗ್ರಹ ಸ್ಥಾಪನೆ ದಿನವಾದ ಶುಕ್ರವಾರ ಶಿಖರ ಕಳಸ ಸ್ಥಾಪನೆ, ಕುಂಭಾಭಿಷೇಕ ನೆರವೇರಿಸಿ ನಂತರ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ನೂತನ ಬೆಳ್ಳಿಕವಚ ಧಾರಣೆ, ಕುಂಕುಮಾರ್ಚನೆ ಸಲ್ಲಿಸಿ ಮಹಾನೈವೇದ್ಯ. ಅಷ್ಟಾವಧಾನ ಸೇವೆ ಸಲ್ಲಿಕೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಆವರಣದಲ್ಲಿ ನಡೆಸಲಾದ ಚಂಡಿಕಾ ಹೋಮದ ಪುರ್ಣಾಹುತಿ ಕಾರ್ಯ ಮಧ್ಯಾಹ್ನ ೧೨.೩೦ಕ್ಕೆ ನಡೆಯಿತು.

ಮೂರು ದಿನಗಳ ಪೂಜಾ ವಿಧಿ ವಿಧಾನವನ್ನು ವೇದಬ್ರಹ್ಮ, ರಾಷ್ಟ್ರೀಯ ರತ್ನ ಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಭಟ್ಟ ಮತ್ತವರ ತಂಡ ನಡೆಸಿತು. ಈ ಎಲ್ಲ ಕಾರ್ಯಗಳ ಮೇಲುಸ್ತುವಾರಿಯನ್ನು ದೇವಸ್ಥಾನದ ವಕ್ತಾರ ಹಾಗೂ ಗ್ರಾಪಂ ಸದಸ್ಯ ಕೆ.ಎನ್.ನಾಗೇಶ್ ವಹಿಸಿದ್ದರು.

ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಡಾ.ಕೆ.ನಾಗೇಶ್, ಡಾ.ಭಾರತಿ ನಾಗೇಶ್, ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್‌ ಕಾಳೇನಹಳ್ಳಿ, ಪೂಜಾ ಕಾರ್ಯದಲ್ಲಿ ಭಾಗಿಯಾಗಿ ದೇವರ ಅರ್ಶಿವಾದ ಪಡೆದರು. ಫೋಟೋ1: ಚನ್ನರಾಯಪಟ್ಟಣದ ಡಿ.ಕಾಳೇನಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮಿದೇವಿ ಅಮ್ಮನನ್ನು ನೂತನವಾಗಿ ಜೀಣೋದ್ಧಾರಗೊಂಡ ದೇವಾಲಯದಲ್ಲಿ ಸ್ಥಾಪನೆ ಮಾಡಿರುವುದು.