ಸಾರಾಂಶ
ಕೈದಿಗಳ ಪರಿವರ್ತನೆ ಮತ್ತು ಸ್ವಾವಲಂಬಿ ಬದುಕಿಗಾಗಿ ಕಾರಾಗೃಹ ಇಲಾಖೆ, ಮಹಾನಗರಪಾಲಿಕೆ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾಡಿರುವ ಈ ವಿನೂತನ ಯೋಜನೆ ಶ್ಲಾಘನೀಯ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಬೆಳೆಸಿದ ಸಸಿಗಳ ಮಾರಾಟ ಕೇಂದ್ರವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಉದ್ಘಾಟಿಸಿದರು.ಕೆಲವು ತಿಂಗಳ ಹಿಂದೆ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದ ಜಿಲ್ಲಾಧಿಕಾರಿ, ಕೈದಿಗಳು ಬೆಳಸಿದ್ದ ವಿವಿಧ ಸಸಿಗಳ ಸಸ್ಯ ಕ್ಷೇತ್ರವನ್ನು ಕಂಡು ಸಂತಸಗೊಂಡಿದ್ದರು. ಇವುಗಳ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರಾಗೃಹ ಮುಂಭಾಗದ ಜಾಗದಲ್ಲಿ ಸಸಿ ಮಾರಾಟ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸಸಿ ಮಾರಾಟ ಕೇಂದ್ರ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಾತನಾಡಿ, ಕಳೆದ ಬಾರಿ ಆಗಮಿಸಿದ ಸಂದರ್ಭ ಇಲ್ಲಿನ ಸಸ್ಯ ಕ್ಷೇತ್ರವನ್ನು ನೋಡಿದಾಗ ಯಾವುದೇ ನರ್ಸರಿಗೆ ಕಡಿಮೆ ಇಲ್ಲದಂತೆ ಬೆಳೆಸಲಾಗಿತ್ತು. ಕೈದಿಗಳು ಬಹಳ ಉತ್ತಮವಾಗಿ ಸಸಿಗಳನ್ನು ಬೆಳೆಸಿದ್ದರು. ಈ ನಿಟ್ಟಿನಲ್ಲಿ ಮಾರಾಟ ಕೇಂದ್ರ ಸ್ಥಾಪಿಸುವ ಮೂಲಕ ಇನ್ನಷ್ಟು ಉತ್ತೇಜನ ನೀಡಲಾಗಿದೆ ಎಂದು ಹೇಳಿದರು.ಕೈದಿಗಳ ಪರಿವರ್ತನೆ ಮತ್ತು ಸ್ವಾವಲಂಬಿ ಬದುಕಿಗಾಗಿ ಕಾರಾಗೃಹ ಇಲಾಖೆ, ಮಹಾನಗರಪಾಲಿಕೆ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾಡಿರುವ ಈ ವಿನೂತನ ಯೋಜನೆ ಶ್ಲಾಘನೀಯ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಇದ್ದರು.