ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಹೊತ್ತಿನಲ್ಲೇ ಮಂಡ್ಯದ ಲೇಬರ್ ಕಾಲೋನಿಯಲ್ಲೂ ಶ್ರೀರಾಮ ಮಂದಿರವು ಅಂದೇ ಉದ್ಘಾಟನೆಗೊಳ್ಳುತ್ತಿದೆ.ಅಯೋಧ್ಯೆಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮನ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಮಂಡ್ಯದ ಶ್ರೀರಾಮಮೂರ್ತಿಯನ್ನು ಕೆತ್ತನೆ ಮಾಡಿರುವುದು ವಿಶೇಷವಾಗಿದೆ.
ವರ್ಷದ ಹಿಂದೆ ಅಯೋಧ್ಯೆ ಮಾದರಿಯ ಕೃಷ್ಣ ಶಿಲೆಯಲ್ಲಿ ಅರುಣ್ ಯೋಗಿರಾಜ್ ಶ್ರೀರಾಮ, ಲಕ್ಷ್ಮಣ, ಸೀತೆ, ಆಂಜನೇಯನನ್ನು ಒಳಗೊಂಡ ವಿಗ್ರಹಗಳನ್ನು ಕೆತ್ತಿದ್ದಾರೆ. ಈ ವಿಗ್ರಹಗಳ ಕೆತ್ತನೆ ಪೂರ್ಣಗೊಂಡ ಬಳಿಕ ಅರುಣ್ ಯೋಗಿರಾಜ್‌ಗೆ ಅಯೋಧ್ಯೆಯ ಶ್ರೀರಾಮ ವಿಗ್ರಹ ಕೆತ್ತನೆಗೆ ದೂರವಾಣಿ ಕರೆ ಬಂದಿತು ಎಂದು ಶ್ರೀರಾಮ ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.ಮಂಡ್ಯದ ಲೇಬರ್ ಕಾಲೋನಿಯಲ್ಲಿರುವ ಸುಮಾರು 70 ವರ್ಷದಷ್ಟು ಹಳೆಯದಾದ ಶ್ರೀರಾಮ ಮಂದಿರವನ್ನು 14 ವರ್ಷಗಳ ಹಿಂದೆ ಕೆಡವಿ ಹೊಸ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹಲವಾರು ಅಡೆತಡೆಗಳ ನಡುವೆಯೂ ಪೂರ್ಣಗೊಂಡು ಇದೀಗ ಉದ್ಘಾಟನೆಗೆ ಸಜ್ಜಾಗಿದೆ.
ಪ್ರತಿಷ್ಠಾಪನೆಗೊಳ್ಳುತ್ತಿರುವ ಶ್ರೀರಾಮನ ವಿಗ್ರಹದ ಜೊತೆಗೆ ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವಿಗ್ರಹಗಳು ಅದ್ಭುತವಾಗಿ ಮೂಡಿಬಂದಿವೆ. ಸ್ಥಳೀಯರು ಈ ವಿಗ್ರಹಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಗ್ರಹಗಳ ಪ್ರತಿಷ್ಠಾಪನೆಗೆ ಮುನ್ನವೇ ಕಾಲೋನಿಯಲ್ಲದೇ ಹೊರಗಿನಿಂದಲೂ ಜನರು ಬಂದು ಕಣ್ಮುಂಬಿಕೊಳ್ಳುತ್ತಿದ್ದಾರೆ.ದೇವಾಲಯದಲ್ಲಿ ಶ್ರೀ ಮಹಾಗಣಪತಿ, ಶ್ರೀ ಧಾನ್ಯಲಕ್ಷ್ಮಿ, ಶ್ರೀ ಲಕ್ಷ್ಮಣ ಹನುಮಂತ ಸಮೇತ ಶ್ರೀ ಸೀತಾ ರಾಮಚಂದ್ರದೇವರ ಬಿಂಬ ಪ್ರತಿಷ್ಠಾಪನಾ ಅಷ್ಟ ಬಂಧ ಬ್ರಹ್ಮಕಳಶ ಮಹೋತ್ಸವಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯ ದಿನವೇ ಜ.22ರಂದೇ ಮಂಡ್ಯದ ಶ್ರೀರಾಮ ಮಂದಿರವೂ ಲೋಕಾರ್ಪಣೆಗೊಳ್ಳುತ್ತಿದೆ. ಉಡುಪಿಯ ಪೇಜಾವರ ಶ್ರೀಗಳ ಶಿಷ್ಯರಿಂದಲೇ ಈ ಮಂದಿರದ ಪ್ರಾಣ ಪ್ರತಿಷ್ಠಾಪನೆ, ಪೂಜಾ-ಕೈಂಕರ್ಯಗಳು ನಡೆಯಲಿವೆ.
ರಾಮಮಂದಿರದ ಲೋಕಾರ್ಪಣೆಗಾಗಿ ಜ.19 ರಿಂದ 22 ರವರೆಗೆ ವಿವಿಧ ಪೂಜಾಕೈಂಕರ್ಯ ನಡೆಯಲಿವೆ. ಇದಕ್ಕಾಗಿ ಲೇಬರ್ ಕಾಲೋನಿ ವೃತ್ತ, ರಸ್ತೆಗಳನ್ನು ಕೇಸರಿ ಧ್ವಜಗಳ ಮೂಲಕ ಶೃಂಗರಿಸಲಾಗಿದೆ. ವಿದ್ಯುತ್ ದೀಪಲಂಕಾರಗಳಿಗೂ ಸಿದ್ಧತೆ ನಡೆಯುತ್ತಿದೆ.ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ, ಕೃಷಿ ಸಚಿವ ಚಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಷ್ ಸೇರಿದಂತೆ ಜಿಲ್ಲೆಯ ಶಾಸಕರು, ಅಧಿಕಾರಿಗಳು, ಧಾನಿಗಳು, ಸ್ಥಳೀಯ ಮುಖಂಡರು, ಯಜಮಾನರು, ಸಮಿತಿ ಸದಸ್ಯರು, ಭಕ್ತರು ಭಾಗವಹಿಸುತ್ತಿದ್ದಾರೆ.
4 ದಿನಗಳ ಪೂಜೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳುರಾಮಮಂದಿರ ಲೋಕರ್ಪಣೆ ಹಿನ್ನೆಲೆಯಲ್ಲಿ ಜ.19 ರಂದು ಗಣಪತಿ ಪೂಜೆ, ಹೋಮ, ಹವನ ನಂತರ ಕಳಶಾಭಿಷೇಕ, ಅಶ್ಲೇಷ ಬಲಿ ಪೂಜೆ, ಮಹಾಮಂಗಳಾರತಿ, ಸಂಜೆ ವರಹಾ ವಿಠ್ಠಲ ದಾಸರಿಂದ ಹನುಮದ್ವಿಲಾಸ ಪ್ರವಚನ ಜರುಗಲಿವೆ. ಜ.20 ರಂದು ಮಹಾಗಣಪತಿ ಹೋಮ, ದುರ್ಗಾ ಹೋಮ, ಸಂಜೆ ಉದಕಶಾಂತಿ ರಾಕ್ಷೋಘ್ನ ಪಾರಾಯಣ, ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ ಜರುಗಲಿವೆ.
ಜ.21 ರಂದು ಬೆಳಗ್ಗೆ ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಸಂಕೀರ್ತನಾ ಕಾರ್ಯಕ್ರಮ, ಸಮೀರಾಚಾರ್ ಅವರಿಂದ ಶ್ರೀರಾಮನ ವ್ಯಕ್ತಿತ್ವ, ಪ್ರವಚನ, ಸಂಜೆ ಬಿಂಬಾಧಿವಾಸ, ಚಕ್ರಾಬ್ಜಮಂಡಲ ಪೂಜೆ, ಕಳಸ ಸ್ಥಾಪನೆ, ಮಹಾಮಂಗಳಾರತಿ ನಡೆಯಲಿದೆ.ಜ.22 ರಂದು ಬೆಳಗ್ಗೆ ಅಧಿವಾಸ ಹೋಮ, ಪ್ರತಿಷ್ಠಾಪನಾಂಗ ಹೋಮ ನಂತರ ಶ್ರೀ ರಾಮದೇವರ ಪ್ರತಿಷ್ಠಾಪನೆ ನಂತರ ಶ್ರೀರಾಮತಾರಕ ಹೋಮ, ಗುರುಪ್ರಸಾದ್ ಚಾರ್ ಅವರಿಂದ ಅಯೋಧ್ಯಾ ಕ್ಷೇತ್ರ ಮಹಾತ್ಮೆ ಪ್ರವಚನ, ಫಲಪಂಚಾಮೃತ ಸಹಿತ ಮಹಾಕುಂಭಿಷೇಕ, ವಿಶೇಷ ಅಲಂಕಾರ, ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಅರವಿಂದಾಚಾರ್ ಇವರಿಂದ ಸೀತಾ ಕಲ್ಯಾಣ ಪ್ರವಚನ, ಸಿಂಚನ ಗೋಪಾಲ್ ಮತ್ತು ತಂಡದಿಂದ ದಾಸವಾಣಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಲೇಬರ್ ಕಾಲೋನಿಯಲ್ಲಿ 1951ರಲ್ಲೇ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಇದಕ್ಕೂ ಮುನ್ನ ಶೆಡ್ಡಿನಲ್ಲಿ ರಾಮದೇವರ ಭಾವಚಿತ್ರವಿಟ್ಟು ಪೂಜೆ ನೆರವೇರಿಸಲಾಗುತ್ತಿತ್ತು. ಸಾಕಷ್ಟು ಅಡೆತಡೆಗಳ ನಡುವೆ ದಾನಿಗಳು, ಜನಪ್ರತಿನಿಧಿಗಳ ಸಹಕಾರ, ಸ್ಥಳೀಯ ಜನರ ನೆರವಿನಿಂದ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನವೇ ಇಲ್ಲಿಯು ಶ್ರೀರಾಮದೇವರ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಿರುವುದು ವಿಶೇಷವಾಗಿದೆ.ಯ.ಮಾದಣ್ಣ, ಶ್ರೀರಾಮ ಸೇವಾ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರು.