ಶಾಲೆಗಳ ಪ್ರಾರಂಭೋತ್ಸವ, ಸಡಗರ, ಸಂಭ್ರಮದ ವಾತಾವರಣ

| Published : Jun 01 2024, 12:45 AM IST

ಸಾರಾಂಶ

ಚಿಕ್ಕಮಗಳೂರು, ಶಾಲೆಯ ಆರಂಭಕ್ಕೆ ಶಿಕ್ಷಕರು ಮೇ 28 ರಂದೇ ಕೊಠಡಿಗಳು, ಬಿಸಿಯೂಟ ತಯಾರಿಕಾ ಕೊಠಡಿಗಳನ್ನು ಶುಚಿಗೊಳಿಸಿ ಸಿದ್ಧತೆ ಮಾಡಿಕೊಂಡಿದ್ದರು. ಮೇ 31ರಂದು ಶಾಲೆಗೆ ಬರುವ ಮಕ್ಕಳಿಗೆ ಯಾವ ರೀತಿಯಲ್ಲಿ ಸ್ವಾಗತಿಸ ಬೇಕೆಂದು ಪ್ಲಾನ್‌ ಮಾಡಿ ಅದರಂತೆ ಬರಮಾಡಿಕೊಂಡರು.

ಮಕ್ಕಳಿಗೆ ಪುಷ್ಪಾರ್ಚನೆ । ಕೈಯಲ್ಲಿ ಗುಲಾಬಿ ಹೂ ಕೊಟ್ಟು ವೆಲ್‌ಕಂ ಹೇಳಿದ ಶಿಕ್ಷಕರು । ಮಧ್ಯಾಹ್ನಕ್ಕೆ ಸಿಹಿ ಊಟ । 48 ದಿನಗಳ ನಂತರ ಶಾಲೆಗಳು ಪ್ರಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶಾಲೆಯ ಆರಂಭಕ್ಕೆ ಶಿಕ್ಷಕರು ಮೇ 28 ರಂದೇ ಕೊಠಡಿಗಳು, ಬಿಸಿಯೂಟ ತಯಾರಿಕಾ ಕೊಠಡಿಗಳನ್ನು ಶುಚಿಗೊಳಿಸಿ ಸಿದ್ಧತೆ ಮಾಡಿಕೊಂಡಿದ್ದರು. ಮೇ 31ರಂದು ಶಾಲೆಗೆ ಬರುವ ಮಕ್ಕಳಿಗೆ ಯಾವ ರೀತಿಯಲ್ಲಿ ಸ್ವಾಗತಿಸ ಬೇಕೆಂದು ಪ್ಲಾನ್‌ ಮಾಡಿ ಅದರಂತೆ ಬರಮಾಡಿಕೊಂಡರು.

ಶುಕ್ರವಾರ ಬೆಳಿಗ್ಗೆಯೇ ಶಾಲೆಗಳಿಗೆ ತೆರಳಿದ ಶಿಕ್ಷಕರು, ತಳಿರು ತೋರಣ ಕಟ್ಟಿದರು. ಶಾಲಾಭಿವೃದ್ಧಿ ಸಮಿತಿಯವರು ಸಹ ಬೇಗ ಬರುವ ವ್ಯವಸ್ಥೆ ಮಾಡಿಕೊಂಡಿದ್ದರು. ಪ್ರತಿ ದಿನದಂತೆ ಬಿಸಿಯೂಟ ಬೇಡ, ಮೊದಲ ದಿನ ಮಕ್ಕಳಿಗೆ ಪಾಯಸದ ಸಿಹಿ ಯೂಟ ಮಾಡಲು ಬಿಸಿಯೂಟ ಕಾರ್ಯಕರ್ತರಿಗೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೂಚನೆ ನೀಡಿದ್ದರು.

ಏಪ್ರಿಲ್‌ 10 ರಂದು ಪರೀಕ್ಷಾ ಫಲಿತಾಂಶದ ನಂತರ ಮನೆಗಳಿಗೆ ತೆರಳಿದ ಮಕ್ಕಳು ಇದೇ ಫಸ್ಟ್‌ ಟೈಂ ಅಂದರೆ, ಸತತ 48 ದಿನಗಳ ನಂತರ ಶುಕ್ರವಾರ ಶಾಲೆಗಳಿಗೆ ಆಗಮಿಸಿದರು. ಮಕ್ಕಳು ಒಬ್ಬೊಬ್ಬರಾಗಿ ಬರುತ್ತಿದ್ದರು. ಶಾಲೆಯ ಅಲಂಕಾರ ನೋಡಿ ಖುಷಿ ಪಟ್ಟರು. ಶಿಕ್ಷಕರ ಪ್ರೀತಿ ಮಾತನ್ನು ಕೇಳಿ ಆನಂದ ಪಟ್ಟರು. ಹೀಗೆ ಬಂದ ಮಕ್ಕಳನ್ನು ಒಟ್ಟಿಗೆ ಸೇರಿಸಿ ಅವರ ಮೇಲೆ ಪುಷ್ಪಾರ್ಚನೆ ಮಾಡಿದರು. ಕೆಲವು ಶಾಲೆಗಳಲ್ಲಿ ಗುಲಾಬಿ ಹೂ ಕೊಟ್ಟು ಸ್ವಾಗತ ಕೋರಿದರೆ, ಮತ್ತೆ ಕೆಲವು ಶಾಲೆಗಳಲ್ಲಿ ಅಲಂಕಾರಿಕ ಪುಷ್ಪಗಳನ್ನು ಕೊಟ್ಟು ವೆಲ್‌ ಕಂ ಹೇಳಿದರು.

ನಂತರ ರಾಜ್ಯ ಸರ್ಕಾರದಿಂದ ಬಂದಿರುವ ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಯಿತು. ಇವುಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಯಲ್ಲಿ ಕುಳಿತುಕೊಂಡರು. ಶಿಕ್ಷಕರು ಮಕ್ಕಳ ಕುಶಲೋಪರಿ ವಿಚಾರಿಸಿದರು. ಮಧ್ಯಾಹ್ನ ವೇಳೆಗೆ ಬಿಸಿಯೂಟ ಕಾರ್ಯಕರ್ತೆಯರು ಸಿದ್ಧಪಡಿಸಿದ್ದ ಬಿಸಿ ಯೂಟವನ್ನು ಮಕ್ಕಳೊಂದಿಗೆ ಶಿಕ್ಷಕರು ಸಹ ಮಾಡಿದರು.ಶೇ. 64 ಪಠ್ಯ ಪುಸ್ತಕ ಸರಬರಾಜು:

ಜಿಲ್ಲೆಯಲ್ಲಿ 1402 ಸರ್ಕಾರಿ, 122 ಅನುದಾನಿತ, 301 ಅನುದಾನ ರಹಿತ ಹಾಗೂ ಮೊರಾರ್ಜಿ ಸೇರಿದಂತೆ ಇತರೆ 99 ಸೇರಿದಂತೆ ಒಟ್ಟು 1924 ಶಾಲೆಗಳಿದ್ದು, ಇವುಗಳಲ್ಲಿ 1,42,380 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಜಿಲ್ಲೆಗೆ ಈವರೆಗೆ ಶೇ. 64 ರಷ್ಟು ಪಠ್ಯ ಪುಸ್ತಕಗಳು ಸರಬರಾಜು ಆಗಿದ್ದು, 5 ಬ್ಲಾಕ್‌ಗಳ ಮಕ್ಕಳಿಗೆ 2 ಜೊತೆ ಬಟ್ಟೆಗಳು ಬಂದಿವೆ. ಇನ್ನುಳಿದ 3 ಬ್ಲಾಕ್‌ಗಳಿಗೆ 6 ರಿಂದ 10 ನೇ ತರಗತಿಯ ಹೆಣ್ಣು ಮಕ್ಕಳಿಗೆ ಬಂದಿವೆ.

31 ಕೆಸಿಕೆಎಂ 5ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ಕನ್ನಡ ಶಾಲೆಯಲ್ಲಿ ಶಿಕ್ಷಕಿಯರು ಮಕ್ಕಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಕೋರಿದರು.

- 31 ಕೆಸಿಕೆಎಂ 6ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಶುಕ್ರವಾರ ಮಕ್ಕಳಿಗೆ ಹೂಗುಚ್ಚ ನೀಡುವ ಮೂಲಕ ಸ್ವಾಗತ ಕೋರಿದರು.