19ರಂದು ಶಿರಾಳಕೊಪ್ಪದಲ್ಲಿ ಶಿವ-ಶಕ್ತಿ ಸಾಂಸ್ಕೃತಿಕ ವನ ಉದ್ಘಾಟನೆ

| Published : Feb 05 2024, 01:50 AM IST

ಸಾರಾಂಶ

ಜಗತ್ತಿನಲ್ಲಿ ಮೊದಲಿಗೆ ವಿವಾಹವಾದದ್ದು ಶಿವ ಪಾವರ್ತಿಯದು ಎಂಬ ನಂಬಿಕೆ ಇದೆ. ಆದ್ದರಿಂದ ಇಲ್ಲಿ ಕಟ್ಟಿಸಲಾಗಿರುವ ಸಾಂಸ್ಕೃತಿಕ ವನ ಫೆ.19ರಂದು ಉದ್ಘಾಟಿಸಲಾಗುವುದು. ಶಿವಶರಣರ ಕ್ಷೇತ್ರ ಹಿನ್ನೆಲೆಯಲ್ಲಿ ವನಕ್ಕೆ ಶಿವ-ಶಕ್ತಿ ಸಾಂಸ್ಕೃತಿಕ ವನ ಎಂದು ಹೆಸರಿಡಬೇಕು ಎಂಬ ಚಿಂತನೆ ಮಾಡಲಾಗಿದೆ ಎಂದು ಶಿರಾಳಕೊಪ್ಪದಲ್ಲಿ ಶ್ರೀಶೈಲ ಜಗದ್ಗುರು ಚೆನ್ನಸಿದ್ದರಾಮ ಜಗದ್ಗುರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ಜಗತ್ತಿನಲ್ಲಿ ಮೊದಲಿಗೆ ವಿವಾಹವಾದದ್ದು ಶಿವ ಪಾವರ್ತಿಯದು ಎಂಬ ನಂಬಿಕೆ ಇದೆ. ಆದ್ದರಿಂದ ಇಲ್ಲಿ ಕಟ್ಟಿಸಲಾಗಿರುವ ಸಾಂಸ್ಕೃತಿಕ ವನ ಫೆ.19ರಂದು ಉದ್ಘಾಟಿಸಲಾಗುವುದು. ಶಿವಶರಣರ ಕ್ಷೇತ್ರ ಹಿನ್ನೆಲೆಯಲ್ಲಿ ವನಕ್ಕೆ ಶಿವ-ಶಕ್ತಿ ಸಾಂಸ್ಕೃತಿಕ ವನ ಎಂದು ಹೆಸರಿಡಬೇಕು ಎಂಬ ಚಿಂತನೆ ಮಾಡಲಾಗಿದೆ ಎಂದು ಶ್ರೀಶೈಲ ಜಗದ್ಗುರು ಚೆನ್ನಸಿದ್ದರಾಮ ಜಗದ್ಗುರು ನುಡಿದರು.

ನೂತನ ವನದಲ್ಲಿ ಶ್ರೀಶೈಲ ಜಗದ್ಗುರು ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶಿರಾಳಕೊಪ್ಪ-ಶಿಕಾರಿಪುರ ರಸ್ತೆಯಲ್ಲಿ ಎಸ್‌ಜೆಪಿ ಐಟಿಐ ಜಾಗದಲ್ಲಿ ₹5 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸಾಂಸ್ಕೃತಿಕ ವನಕ್ಕೆ ನಿರ್ಮಿಸಲಾಗಿದೆ. ಇದಕ್ಕೆ ಶಿವ-ಶಕ್ತಿ ಸಾಂಸ್ಕೃತಿಕ ವನ ಹಾಗೂ ದಾಸೋಹ ವನಕ್ಕೆ ಮೈತ್ರಾದೇವಿ ಯಡಿಯೂರಪ್ಪ ದಾಸೋಹ ಮಂದಿರ ಹಾಗೂ ಪ್ರವಾಸಿಗರ ವಸತಿ ನಿಲಯಕ್ಕೆ ಶಿವಶರಣೆ ಅಕ್ಮಹಾದೇವಿ ವಸತಿ ನಿಲಯ ಎಂದು ಹೆಸರಿಡಲಾಗುವುದು. ಈ ಎಲ್ಲ ಕಾರ್ಯಗಳ ಯಶಸ್ವಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಕಾರಣರು ಎಂದು ಶ್ಲ್ಯಾಘಿಸಿದರು.

ಉದ್ಘಾಟನೆ ಪೂರ್ವಭಾವಿಯಾಗಿ ಸೊರಬ ರಸ್ತೆಯ ಕಾಲೇಜು ಮೈದಾನದಲ್ಲಿ 4 ದಿನಗಳ ಪ್ರವಚನ ನಡೆಸಬೇಕು. ಆ ಮುಖಾಂತರ ಜನರನ್ನು ಆಕರ್ಷಿಸಬೇಕು. ಪ್ರತಿದಿನ ಅನ್ನ ಸಂತರ್ಪಣೆ ನಡೆಸಬೇಕು. ಪಟ್ಟಣದಲ್ಲಿ ನಡೆಯಲಿರುವ ಜಾತ್ರೆಯಲ್ಲಿ ಜನರು ಭಾಗವಹಿಸುವಂತೆ ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಂಸತ್‌ ಚುನಾವಣೆ ಹಿನ್ನೆಲೆ ಸಾಂಸ್ಕೃತಿಕ ವನದ ಉದ್ಘಾಟನೆಯನ್ನು ಫೆಬ್ರವರಿಯಲ್ಲೇ ಆಯೋಜಿಸಲಾಗಿದೆ. ಉದ್ಘಾಟನೆಗೆ ಸಮಸ್ಯೆ ಆಗಬಾರದು ಎಂದು ದಿನಾಂಕ ನಿಗದಿಪಡಿಸಲಾಗಿದೆ. ಈ ಸಂದರ್ಭದಲ್ಲಿ ನಡೆಯುವ 4 ದಿನಗಳ ಪ್ರವಚನದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಭಾಗವಹಿಸಲು ತಿಳಿಸಿದರು. ಮತ್ತೆ ಲೋಕಸಭೆಗೆ ಆಯ್ಕೆ ಮಾಡಿದಲ್ಲಿ ಕ್ಷೇತ್ರದ ಕೆಲಸ, ಕಾರ್ಯಗಳನ್ನು ಸಮಪರ್ಕವಾಗಿ ಕೈಗೊಳ್ಳಲು ಸಿದ್ಧ ಎಂದು ತಿಳಿಸಿದರು.

ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು. ತೊಗರ್ಸಿ ಮಹಂತ ದೇಶಿಕೇಂದ್ರ ಸ್ವಾಮೀಜಿ, ಎಸ್‌ಜೆಪಿ ಐಟಿಐ ಕಾಲೇಜಿನ ಕಾರ್ಯದರ್ಶಿ ಡಾ.ಮುರಘರಾಜ್ ಮಾತನಾಡಿದರು.

ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ತೊಗರ್ಸಿ ಮಳೆ ಮಠದ ಕಿರಿಯ ಸ್ವಾಮಿಗಳು, ಎಚ್.ಎಂ. ಗಂಗಮ್ಮ, ಅಗಡಿ ಅಶೋಕ, ಕಾಲೇಜಿನ ಕಾರ್ಯದರ್ಶಿ ನಿವೇದಿತಾ ರಾಜು, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ, ಕಾಲೇಜು ಸಮಿತಿ ಸದಸ್ಯ ರಾಮನಗೌಡ, ಹಾಲಪ್ಪ ಗೌಡ, ಪುಟ್ಟರಾಜಗೌಡ, ಸುನಂದಮ್ಮ ಇತರರು ಹಾಜರಿದ್ದರು.

- - - -4ಕೆಎಸ್‌ಎಚ್ಆರ್‌1:

ಶಿರಾಳಕೊಪ್ಪ ಐಟಿಐ ಕಾಲೇಜಿನ ನೂತನ ಸಾಂಸ್ಕೃತಿಕ ವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಅವರನ್ನು ಅಭಿನಂದಿಸಲಾಯಿತು.