ಯಲ್ಲಾಪುರ: ಕೆರೆಗಳನ್ನು ಹೂಳೆತ್ತುವುದರಿಂದ ರೈತರಿಗೊಂದೇ ಅಲ್ಲದೇ ಪ್ರಾಣಿ, ಪಶು, ಪಕ್ಷಿಗಳಿಗೂ ನೀರನ್ನು ನೀಡಿದ ಪುಣ್ಯ ಲಭಿಸುತ್ತದೆ. ಅಲ್ಲದೇ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಬೈಚಗೋಡ ಹೂಳೆತ್ತಿದ ಕೆರೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಕಾರ್ಯಕ್ಕೆ ಸಹಾಯ ಮಾಡಿದ ಸಂಸ್ಥೆಯ ಪ್ರತಿನಿಧಿಗಳನ್ನು ಸನ್ಮಾನಿಸಿ ಮಾತನಾಡಿದರು. ನೀರಿನ ಯೋಜನೆಗೆ ನಾನು ಅತ್ಯಂತ ಮಹತ್ವ ನೀಡುತ್ತಿದ್ದೇನೆ. ಉನ್ನತ ಸ್ಥಾನಕ್ಕೆ ಏರಿದಾಗ ಕಲಿತ ಶಾಲೆಗೆ, ಊರಿಗೆ ಸಾಧ್ಯವಾದ ಎಲ್ಲ ನೆರವನ್ನು ನೀಡುವ ಹೃದಯ, ಮನಸ್ಸು ಇರಬೇಕು. ಅದಕ್ಕೆ ಭಗವಂತನ ಅನುಗ್ರಹ ಕೂಡ ಲಭಿಸುತ್ತದೆ ಎಂದು ಹೇಳಿದರು.ಮನುವಿಕಾಸ ಸಂಸ್ಥೆ ನನ್ನ ಕ್ಷೇತ್ರದಲ್ಲೇ ನೂರಾರು ಕೆರೆಗಳಿಗೆ ಹೂಳೆತ್ತಿದೆ. ಅಲ್ಲಿ ಗಣಪತಿ ಭಟ್ಟ ಮತ್ತು ಅವರ ತಂದೆಯ ಕೊಡುಗೆ ಅನನ್ಯವಾದುದು. ಈ ಊರಿನವರೇ ಆದ ವಿಜಯಾ ಹೆಗಡೆ ಬೆಂಗಳೂರಿನ ಕ್ಲೂಬರ್ ಲುಬ್ರಿಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸರ್ಟೆಕ್ ಕೆಮಿಕಲ್ಸ್ ಇಂಡಿಯಾ ಲಿಮಿಟೆಡ್‌ನಿಂದ ಸಿಎಸ್‌ಆರ್ ನಿಧಿಯಲ್ಲಿ ಹಣ ಕೊಡಿಸಿ ತನ್ನ ಊರಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇಲ್ಲಿನ ಶಾಲೆಯ ಅಭಿವೃದ್ಧಿಗೂ ಅವರು ಅಷ್ಟೇ ಕೊಡುಗೆ ನೀಡಿದ್ದಾರೆ. ರಾಮಕೃಷ್ಣ ಹೆಗಡೆ ಶಾಸಕರಾದಾಗ ಮುಂಡಗೋಡಿನಲ್ಲಿ ಹತ್ತಾರು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದರು. ಆ ಕೆರೆಗಳಿಲ್ಲದಿದ್ದರೆ ಅಲ್ಲಿನ ಜನರ ಬದುಕು ಕಷ್ಟವಾಗುತ್ತಿತ್ತು ಎಂದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಮಾತನಾಡಿ, ನಮ್ಮ ಸಂಸ್ಥೆ ನಾಡಿನಾದ್ಯಂತ ೩೪೦ಕ್ಕೂ ಹೆಚ್ಚಿನ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಿದೆ ಎಂದರು.ಸನ್ಮಾನ ಸ್ವೀಕರಿಸಿದ ಕಂಪನಿಯ ಪ್ರತಿನಿಧಿ ವಿಜಯಾ ಹೆಗಡೆ ಮಾತನಾಡಿ, ನಮ್ಮ ಗ್ರಾಮಕ್ಕೆ ಸಹಾಯ ಮಾಡಿದ ಸಂತೃಪ್ತಿ ನನಗಿದೆ ಎಂದರು.
ತನುಜಾ ಮರಾಠೆ ಸ್ವಾಗತಿಸಿದರು. ಮನುವಿಕಾಸ ಸಂಸ್ಥೆಯ ಅಧ್ಯಕ್ಷ ಹರಿಶ್ಚಂದ್ರ ಭಟ್ಟ, ಪ್ರಮುಖರಾದ ನವೀನ ಹೆಗಡೆ, ಸುಜಾತಾ ಸಿದ್ದಿ, ಚಂದ್ರಶೇಖರ ಮೊಗೇರ, ಬಸವರಾಜ ಬೋಚಳ್ಳಿ, ಗುರು ಭಟ್ಟ ಮತ್ತಿತರರು ಉಪಸ್ಥಿತರಿದ್ದರು.