ಅದ್ವೈತ ಆಶ್ರಮ ಎಂದೇ ಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ ಬಹು ಕಾಲದಿಂದ ಆಧ್ಯಾತ್ಮಿಕ ಅದ್ವೈತದ ಚಟುವಟಿಕೆಗಳು ನಡೆದುಕೊಂಡು ಬಂದಿವೆ. ಹಾಲ್ತಿ ಸ್ವರ್ಗಾಶ್ರಮದ ಅಮರಾನಂದಶ್ರೀಗಳು ಇಲ್ಲಿ ನೆಲೆಸಿದ್ದ ವೇಳೆ ಸಣ್ಣದಾದ ದೇವಸ್ಥಾನ ಹೊರತುಪಡಿಸಿದರೆ ಬೇರೇನೂ ಇರಲಿಲ್ಲ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಸಾಮಾನ್ಯ ವ್ಯಕ್ತಿಗೂ ಅದ್ವೈತ ಪರಂಪರೆಯ ಜ್ಞಾನವನ್ನು ಕೊಡಬೇಕೆಂಬ ಆಶಯ ಹೊಂದಿದ್ದ ಹಾಲ್ತಿ ಸ್ವರ್ಗಾಶ್ರಮದ ಅಮರಾನಂದಶ್ರೀಗಳ ಜ್ಞಾನ, ವಿಶಿಷ್ಟ ಅದ್ವೈತವನ್ನು ಒಪ್ಪಿಕೊಂಡು ನಮ್ಮ ಪರಮಗತ್ಯವನ್ನು ತಲುಪೋಣ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಸ್ವರ್ಗಾಶ್ರಮ ಹಾಲ್ತಿ ಶಾಖಾ ಮಠದಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಮಹಾದ್ವಾರದ ನೂತನ ರಾಜಗೋಪುರ ಉದ್ಘಾಟನೆ ಹಾಗೂ ಮಹಾಕುಂಭಾಭಿಷೇಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಅದ್ವೈತ ಆಶ್ರಮ ಎಂದೇ ಖ್ಯಾತಿ ಪಡೆದಿರುವ ಈ ಕ್ಷೇತ್ರದಲ್ಲಿ ಬಹು ಕಾಲದಿಂದ ಆಧ್ಯಾತ್ಮಿಕ ಅದ್ವೈತದ ಚಟುವಟಿಕೆಗಳು ನಡೆದುಕೊಂಡು ಬಂದಿವೆ. ಹಾಲ್ತಿ ಸ್ವರ್ಗಾಶ್ರಮದ ಅಮರಾನಂದಶ್ರೀಗಳು ಇಲ್ಲಿ ನೆಲೆಸಿದ್ದ ವೇಳೆ ಸಣ್ಣದಾದ ದೇವಸ್ಥಾನ ಹೊರತುಪಡಿಸಿದರೆ ಬೇರೇನೂ ಇರಲಿಲ್ಲ. ಇದನ್ನು ಮನಗಂಡ ಭೈರವೈಕ್ಯ ಬಾಲಗಂಗಾಧನಾಥಶ್ರೀಗಳು ಶ್ರೀಮಠದಿಂದ ಏನೆಲ್ಲಾ ಅಗತ್ಯವಿದೆಯೋ ಅವೆಲ್ಲವನ್ನೂ ಕೊಂಡೊಯ್ದು ಹಾಲ್ತಿ ಸ್ವರ್ಗಾಶ್ರಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಎಂದು ಸಲಹೆ ನೀಡಿದ್ದರು ಎಂದರು.ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಇಲ್ಲಿ ನೆಲೆಸಿದ್ದ ಶ್ರೀ ಅಮರಾನಂದ ಪರಮಹಂಸಶ್ರೀಗಳು ಆಧ್ಯಾತ್ಮಿಕ ಜ್ಞಾನವನ್ನು ನಾಡಿನಾದ್ಯಂತ ಬೋಧಿಸುತ್ತಾ ಅಪಾರ ಭಕ್ತವೃಂದವನ್ನು ಗಳಿಸಿದ್ದರು. ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಅತ್ಯಂತ ಅಭಿಮಾನದಿಂದ ಈ ಧಾರ್ಮಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.
ಪರಶುರಾಮರ ಕ್ಷೇತ್ರವೆಂದು ಖ್ಯಾತಿ ಪಡೆದಿರುವ ಈ ಪುಣ್ಯಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮುನ್ನಡೆಸುವಂತೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದರು. ನಂತರ ನಿರ್ಮಲಾನಂದನಾಥಶ್ರೀಗಳು ಹಾಗೂ ಮೈಸೂರು ಶಾಖಾ ಮಠದ ಸೋಮೇಶ್ವರನಾಥಶ್ರೀಗಳು ಬಹಳ ಆಸಕ್ತಿ ವಹಿಸಿ ನಿರ್ಮಿಸಿದ್ದ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ರಾಜಗೋಪುರ ನಿರ್ಮಾಣ ಸೇರಿದಂತೆ ಬಹಳಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವುದರಿಂದ ಈ ಭಾಗದ ಭಕ್ತರಿಗೆ ಹೆಚ್ಚು ಅನುಕೂಲವಾಗಿದೆ. ಈ ಧಾರ್ಮಿಕ ಕ್ಷೇತ್ರ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸೃಷ್ಟಿಯ ಚರಾಚರ ವಸ್ತುಗಳಲ್ಲಿಯೂ ದೇವರಿದ್ದಾನೆ. ಹಾಗಾಗಿ ನಮ್ಮ ಪೂರ್ವಿಕರು ಮಣ್ಣು, ಕಲ್ಲು, ನೀರು, ಗಿಡಮರ, ಮನುಷ್ಯ, ಪ್ರಾಣಿ ಸೇರಿದಂತೆ ಎಲ್ಲದರಲ್ಲಿಯೂ ದೇವರನ್ನು ಕಂಡರು. ನಮ್ಮ ಅಂತರಂಗದ ಜಾಗೃತಿಗೆ ಯಾವುದಾದರೊಂದು ಜಾಗ ಬೇಕು. ಅದಕ್ಕಾಗಿ ದೇವಾಲಯಗಳು ಅತ್ಯವಶ್ಯಕ. ಆದ್ದರಿಂದ ದೇವಸ್ಥಾನಗಳಲ್ಲಿ ಮಾತ್ರ ದೇವರಿದ್ದಾನೆ ಎಂದು ಭಾವಿಸಬಾರದು. ಸದ್ಗುಣವಿರುವ ಕಡೆ ಸ್ವರ್ಗ ದುರ್ಗುಣವಿರುವ ಕಡೆ ನರಕವನ್ನು ಕಾಣಬಹುದು ಎಂದರು.
ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥಸ್ವಾಮೀಜಿ ಸ್ವಾಗತಿಸಿದರು. ಇದಕ್ಕೂ ಮುನ್ನ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹೋಮ ಹವನಾದಿ ಪೂಜಾ ಕೈಂಕರ್ಯಗಳು ಜರುಗಿದವು. ಹೋಮಕುಂಡಕ್ಕೆ ಪೂರ್ಣಾಹುತಿ ಸಲ್ಲಿಸಿದ ನಂತರ ಶ್ರೀಗಳು ರಾಜಗೋಪುರ ಹಾಗೂ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥವನ್ನು ಲೋಕಾರ್ಪಣೆ ಮಾಡಿದರು.ರಾಜಗೋಪುರ ಉದ್ಘಾಟನೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿ ಹೋಮ ಹವನಾದಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಸುತ್ತ ಮುತ್ತಲ ಗ್ರಾಮಗಳಿಂದ 52 ಗ್ರಾಮದೇವತೆಗಳ ಉತ್ಸವ ಮೂರ್ತಿಗಳನ್ನು ಕರೆತರಲಾಗಿತ್ತು.
ಮೇಳೈಸಿದ ಜಾನಪದ ಕಲರವ: ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಮಹಾದ್ವಾರದ ನೂತನ ರಾಜಗೋಪುರ ಉದ್ಘಾಟನೆ ಹಾಗೂ ಮಹಾಕುಂಭಾಭಿಷೇಕದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಮಂಗಳವಾದ್ಯ, ಚಂಡೆವಾದ್ಯ, ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ ಮೇಳ, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೇಳೈಸಿದವು. ಖ್ಯಾತ ಗಾಯಕ ಮಳವಳ್ಳಿ ಮಹದೇವಸ್ವಾಮಿ ತಂಡದವರಿಂದ ಜಾನಪದ ಹಾಗೂ ಭಕ್ತಿಗೀತೆಗಳು ಹೊರಹೊಮ್ಮಿದವು.ಹಾಸನ ಶಾಖಾ ಮಠದ ಶಂಭುನಾಥಸ್ವಾಮೀಜಿ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಸಹಸ್ರಾರು ಮಂದಿ ಭಕ್ತರು ಇದ್ದರು.