ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿವಿಶ್ವದಲ್ಲಿ ಭಾರತ ಭವ್ಯವಾಗಿರುವುದು ತನ್ನ ಬಹುತ್ವದ ಕಾರಣವೇ ಹೊರತು ಏಕ ಸಂಸ್ಕೃತಿಯಿಂದಲ್ಲ ಎಂದು ರಂಗಾಯಣದ ಮಾಜಿ ನಿರ್ದೇಶಕ, ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ) ಹೇಳಿದರು.ಅವರು ಭಾನುವಾರ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರದಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.ಹಲವು ಭಾಷೆ, ಪ್ರದೇಶ ಜನಾಂಗ ಒಟ್ಟಿಗೆ ಸಾಗುವುದೇ ಸಂಸ್ಕೃತಿ. ಏಕ ಸಂಸ್ಕೃತಿ ಎನ್ನುವುದು ವಿಕೃತಿ ಎಂದವರು ಪ್ರತಿಪಾದಿಸಿದರು.ರಂಗಭೂಮಿ ಎನ್ನುವುದು ಮನುಷ್ಯ ಸಂಬಂಧ ಬೆಸೆಯುವ ವೇದಿಕೆ. ರಂಗಭೂಮಿ ಎನ್ನುವುದು ಧರ್ಮ. ನಾಟಕಗಳು ಧರ್ಮಕಾರ್ಯ. ಮೇಲು ಕೀಳು ಎಂಬ ಭೇದ ಇಲ್ಲದೆ ಎಲ್ಲವೂ ಚೇತನಗಳು ಎಂದು ಸಾರುವ ಮಾನವ ಧರ್ಮವೇ ರಂಗಭೂಮಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಹಿರಿಯ ರಂಗಸಾಧಕ ಸನ್ಮಾನ ಸ್ವೀಕರಿಸಿದ ಕಲಾವಿದೆ ಗೀತಾ ಸುರತ್ಕಲ್ ಅವರಿಗೆ ರಂಗಸಾಧಕ ಸನ್ಮಾನ ನೀಡಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸಾಧು ಸಾಲ್ಯಾನ್, ದಿವಾಕರ ಶೆಟ್ಟಿ ತೋಟದಮನೆ, ನವೀನ್ ಅಮೀನ್ ಶಂಕರಪುರ, ನೂತನ್ ಕ್ರೆಡಿಟ್ ಕಾಫಿ ಆಪರೇಟಿವ್ ಸೊಸೈಟಿ ಮಹಾ ಪ್ರಬಂಧಕ ಗಣೇಶ್ ಶೇರಿಗಾರ್, ಸುಮನಸಾ ಗೌರವಾಧ್ಯಕ್ಷ ಎಂ. ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ದಯಾನಂದ ಕರ್ಕೇರ ನಿರೂಪಿಸಿದರು.