ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆತಾಲೂಕಿನ ಆನಗಟ್ಟಿ ಹಾಡಿಯಲ್ಲಿ ಮರಿಯ ಅವರ ಅಧ್ಯಕ್ಷತೆಯಲ್ಲಿ ಅರಣ್ಯಹಕ್ಕು ಸಮಿತಿ ನಾಮಫಲಕ ಉದ್ಘಾಟನಾ ಕಾರ್ಯಕ್ರಮ ಜರುಗಿತು.ನಿಸರ್ಗ ಫೌಂಡೇಷನ್ ಸಂಸ್ಥೆಯ ಚಿಕ್ಕತಿಮ್ಮನಾಯ್ಕ ಮಾತನಾಡಿ, ಇಂದು ನಾವು ಹಾಡಿಯಲ್ಲಿ ಅರಣ್ಯಹಕ್ಕು ಸಮಿತಿ ರಚಿಸಿ, ನಾಮಫಲಕ ಉದ್ಘಾಟಿಸಿರುವುದು ತುಂಬಾ ಸಂತೋಷದ ವಿಷಯ. ಈ ಹಿನ್ನಲೆಯಲ್ಲಿ ಅರಣ್ಯ ಹಕ್ಕು ಸಮಿತಿ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಹಾಡಿಯ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತೀ ತಿಂಗಳು ಸಭೆ ಮಾಡಿ ತಮ್ಮ ಸಮಸ್ಯೆಗಳನ್ನು ತಾವೇ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಆದಿವಾಸಿಗಳ ಕಲೆ ಸಂಸ್ಕೃತಿ ನಶಿಸಿ ಹೋಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸಲು ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಹಾಡಿಗಳಲ್ಲಿ ಶಾಲೆ ಬಿಟ್ಟ ಮಕ್ಕಳು ಹೆಚ್ಚಾಗಿದ್ದು, ಅವರನ್ನು ಶಾಲೆಗೆ ಕಳುಹಿಸುವತ್ತ ಪೋಷಕರು ಗಮನಹರಿಸುವುದರ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.ಕಳೆದ ಒಂದು ತಿಂಗಳ ಹಿಂದೆ ಗ್ರಾಪಂ ವತಿಯಿಂದ ಆಯೋಜಿಸಿದ್ದ ವಿಶೇಷ ಅರಣ್ಯ ಹಕ್ಕಿನ ಗ್ರಾಮಸಭೆಯಲ್ಲಿ ಹಾಡಿಯಿಂದ ಅರಣ್ಯ ಹಕ್ಕು ಕಾಯ್ದೆ- 2006ರ ಅಡಿಯಲ್ಲಿ 24 ಕುಟುಂಬಗಳು ವೈಯಕ್ತಿಕ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದು, ಆದಷ್ಟು ಬೇಗ ಜಿ.ಪಿ.ಎಸ್. ಮಾಡಿಸಿ ಅರ್ಜಿಗಳನ್ನು ಉಪ ವಿಭಾಗಾಧಿಕಾರಿಗೆ ಕಳುಹಿಸಿಕೊಡುವಂತೆ ಒತ್ತಾಯಿಸಿದರು.ನೂರಲಕುಪ್ಪೆ ಗ್ರಾಪಂ ಅಧ್ಯಕ್ಷೆ ಸುನೀತಾ ಮಹದೇವಸ್ವಾಮಿ ಮಾತನಾಡಿ, ಈ ದಿನ ಹಾಡಿಯ ಜನರೆಲ್ಲರು ಒಟ್ಟಿಗೆ ಸೇರಿ ಕಾರ್ಯಕ್ರಮ ಮಾಡುತ್ತಿದ್ದು, ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಮೂಲ ದಾಖತಿಗಳಿಲ್ಲದೆ ಇರುವವರಿಗೆ ಪ.ವರ್ಗಗಳ ಕಲ್ಯಾಣ ಇಲಾಖೆಗೆ ಅರ್ಜಿ ಬರೆದು ಮುಂದಿನ ದಿನಗಳಲ್ಲಿ ಹಾಡಿಗಳಲ್ಲಿ ಆಧಾರ್ ಶಿಬಿರ ಹಾಗೂ ಬ್ಯಾಂಕ್ ಅಕೌಂಟ್ ಶಿಬಿರ ಏರ್ಪಡಿಸಲಾಗುವುದು ಎಂದರು.ನಿಸರ್ಗ ಸಂಸ್ಥೆಯ ಕಾರ್ಯಕರ್ತರಾದ ಜ್ಯೋತಿ, ನೂರಲಕುಪ್ಪೆ ಗ್ರಾಪಂ ಉಪಾಧ್ಯಕ್ಷ ಪಾರ್ವತಮ್ಮ, ಸದಸ್ಯರಾದ ದೇವಯ್ಯ, ಅರಣ್ಯಹಕ್ಕು ಸಮಿತಿ ಕಾರ್ಯದರ್ಶಿ ಕಾಳ, ಸದಸ್ಯರಾದ ಗಿಣಿಯ, ರಾಜಮ್ಮ, ಮಾದಯ್ಯ, ಪುಟ್ಟಿ, ರೂಪಾ, ಮಾರೆ, ಸ್ವಾಮಿ, ಲಲಿತಾ, ಗಣೇಶ ಸೇರಿದಂತೆ 40 ಮಂದಿ ಭಾಗವಹಿಸಿದ್ದರು.