ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ

| Published : Mar 26 2025, 01:33 AM IST

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಬೆಳೆ ಸಾಲ, ಅಭಿವೃದ್ಧಿ ಸಾಲಗಳನ್ನು ವಿತರಿಸಿ ಅನುಕೂಲ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಕೇಂದ್ರ ಸರ್ಕಾರದ ಅಸಹಕಾರ ನೀತಿಯಿಂದ ನಬಾರ್ಡ್ ವತಿಯಿಂದ ಸಾಲ ಸೌಲಭ್ಯ ದೊರೆಯದೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಈ ಧೋರಣೆ ಕೈ ಬಿಟ್ಟು ರೈತರಿಗೆ ಸಾಲ ವಿತರಿಸಲು ಮುಂದಾಗಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಮಂಗಳವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳುವುದು ಆಳುವ ಸರ್ಕಾರಗಳು ಸೇರಿದಂತೆ ಪ್ರತಿಯೊಬ್ಬರ ಕರ್ತವ್ಯ ಎಂದರು.

ರೈತರು ಬ್ಯಾಂಕ್ನಿಂದ ಪಡೆದ ಸಾಲ ಸೌಲಭ್ಯವನ್ನು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಬ್ಯಾಂಕ್ ಸಶಕ್ತ ನಡೆಗೆ ಸಹಕಾರ ನೀಡಬೇಕೆಂದರು. ಕೇಂದ್ರ ಸರ್ಕಾರ ಆರಂಭದಿಂದಲೂ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅವರ ಪಕ್ಷದ ಸರ್ಕಾರಗಳು ಇರುವ ರಾಜ್ಯಗಳಿಗೆ ಒಂದು ನ್ಯಾಯ, ಅನ್ಯ ಪಕ್ಷಗಳು ಇರುವ ಸರ್ಕಾರಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳಿಗೆ ಬೇರೊಂದು ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ನಮ್ಮಿಂದ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್ಟಿ ಹಣ ಪಡೆಯುವ ಕೇಂದ್ರ ಸರ್ಕಾರ, ಆ ಕಡೆಯಿಂದ ರಾಜ್ಯಕ್ಕೆ ಬರುವ ವಿವಿಧ ರೀತಿಯ ಅನುದಾನ ವಿಚಾರದಲ್ಲಿ ಜಿಪುಣತನ ಮಾತ್ರವಲ್ಲ, ಹಗೆತನ ಪ್ರದರ್ಶನ ಮಾಡುತ್ತಿದ್ದು, ಈ ಧೋರಣೆ ನಿಲ್ಲಬೇಕು ಎಂದು ಹೇಳಿದರು. ಇಲ್ಲದಿದ್ದರೆ ಒಕ್ಕೂಟ ವ್ಯವಸ್ಥೆಗೆ ಅನ್ಯಾಯ, ಅಪಮಾನ ಮಾಡಿದಂತೆ ಆಗಲಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿರುವ ನಮ್ಮ ಸರ್ಕಾರ, ಪಂಚ ಗ್ಯಾರಂಟಿ ಜಾರಿ ಜೊತೆಗೆ ರೈತರು, ಬಡವರು ಸೇರಿದಂತೆ ಪ್ರತಿಯೊಬ್ಬರಿಗೆ ಬೇಕಾದ ಸವಲತ್ತು ಒದಗಿಸಿಕೊಡಲು ಸದಾ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷ ಸುಜಾತ ರುದ್ರಪ್ಪ, ಅನಿತಾ ರವಿ, ಗೋವಿಂದಪ್ಪ, ಐಶ್ವರ್ಯ ಮಹೇಶ್ , ಎಸ್ಎನ್ ಮಲ್ಲಿಕಾರ್ಜುನ್ ಎಸ್ ಪಿ ನಾಗರಾಜ್, ನಾಗರಾಜ್, ಶಿವಕುಮಾರ್, ಶಿವಕುಮಾರ್, ಶಹಜಾನ್, ವಿಶ್ವನಾಥ್, ಓಂಕಾರ ಮೂರ್ತಿ ಹಾಗೂ ಗ್ರಾಮಸ್ಥರು ಹಾಜರಿದ್ದರು.