ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ದಕ್ಷಿಣ ಭಾರತದ ಪ್ರವಾಸೋದ್ಯಮದ ಕೇಂದ್ರ ಬಿಂದು ಆಗಬೇಕು, ಅತಿ ಪ್ರಮುಖ ಪ್ರವಾಸಿ ಸ್ಥಳವಾಗಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮಿಗಳ ಕಾರ್ಯ ಪ್ರಮುಖವಾದದ್ದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ನಗರದಲ್ಲಿ ಟ್ರಿಪ್ ಡೋರ್ ಟ್ರಾವಲ್ಸ್ ಸಂಸ್ಥೆಯ ಉದ್ಘಾಟನೆ, ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೈಸೂರು ಪ್ರವಾಸೋದ್ಯಮ ಕ್ಷೇತ್ರ ಬಹಳಷ್ಟು ಅಭಿವೃದ್ದಿ ಆಗಬೇಕು. ಈ ನಿಟ್ಟಿನಲ್ಲಿ ಟ್ರಿಪ್ ಡೋರ್ ನಂತಹ ಸಂಸ್ಥೆಗಳ ಕೆಲಸ ಪ್ರಮುಖವಾದದ್ದು. ಇಂಥ ಸಂಸ್ಥೆಗಳು ಆರಂಭವಾದರೆ ಮೈಸೂರಿನ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಎರಡೂ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಹಾಗೂ ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಮಾತನಾಡಿ, ಮೈಸೂರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆಯಬೇಕಿದೆ. ಕೇವಲ ವರ್ಷದ ಒಂದೆರಡು ಸಂದರ್ಭಗಳಲ್ಲಿ ಮಾತ್ರವಲ್ಲದೆ ಇಡೀ ವರ್ಷ ಮೈಸೂರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಇರಬೇಕು. ಯಾವಾಗಲೂ ಪ್ರವಾಸಿಗರು ಮೈಸೂರಿಗೆ ಬರುತ್ತಿರುವಂತೆ ಆಗಬೇಕು ಎಂದರು.ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಯುವಪೀಳಿಗೆ ಹಾಗೂ ಇನ್ ಫ್ಲುಯೆನ್ಸರ್ ಗಳು ಮೈಸೂರಿನ ಪ್ರವಾಸಿ ತಾಣಗಳನ್ನು ಹೆಚ್ಚು ಪ್ರಚಾರ ಮಾಡಬೇಕು. ಆಗ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ಅವರು ಹೇಳಿದರು.
ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ವಿಭಾಗದ ಅಧ್ಯಕ್ಷ ಸಿ.ಎ. ಜಯಕುಮಾರ್ ಮಾತನಾಡಿ, ನಾನು ಸಮರ್ಥ್ ವೈದ್ಯ ಹಾಗೂ ಅಂಜಲಿ ಸಮರ್ಥ್ ಅವರನ್ನು ನಾನು ಬಹಳ ವರ್ಷಗಳಿಂದ ನೋಡುತ್ತಿದ್ದೇನೆ. ಮೈಸೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು ಎಂದರೆ ಇಂತಹ ಯುವ ಪ್ರತಿಭೆಗಳು ಹೊಸ ಪ್ರಯತ್ನಗಳನ್ನು ಮಾಡಬೇಕು. ಪ್ರವಾಸೋದ್ಯಮದ ಬಗ್ಗೆ ಇಷ್ಟು ಆಸಕ್ತಿ ಇರಿಸಿಕೊಂಡು ಟ್ರಿಪ್ ಡೋರ್ ಸಂಸ್ಥೆ ಆರಂಭಿಸಿರುವ ಇವರ ಪ್ರಯತ್ನ ಶ್ಲಾಘನೀಯ.ಮೈಸೂರಿನ ಬಗ್ಗೆ ಕಾಳಜಿ ಇರುವ ಇಂತಹ ಜನರು ನಮ್ಮ ಉದ್ಯಮಕ್ಕೆ ಇನ್ನಷ್ಟು ಬೇಕು ಎಂದರು.ಮೈಸೂರು ಯೋಗ ಫೆಡರೇಶನ್ ಅಧ್ಯಕ್ಷ ಶ್ರೀಹರಿ ಮಾತನಾಡಿ, ಸಮರ್ಥ್ ವೈದ್ಯ ಅವರು ಹೆಸರಿಗೆ ತಕ್ಕಂತೆ ಸಮರ್ಥರು. ಆದ್ದರಿಂದಲೇ ಇಷ್ಟು ಸುಸಜ್ಜಿತವಾದ ಸಂಸ್ಥೆ ಆರಂಭಿಸಿದ್ದಾರೆ. ಈಗಾಗಲೇ ಚಾಲ್ತಿಯಲ್ಲಿದ್ದ ಈ ಸಂಸ್ಥೆ ಈಗ ರೀಬ್ರ್ಯಾಂಡ್ ಆಗಿದೆ. ಇವರಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ಸಿಗಲಿ ಎಂದು ಹೇಳಿದರು.
ಇದೇ ವೇಳೆ ಹಿರಿಯ ಪ್ರವಾಸಿ ಮಾರ್ಗದರ್ಶಕ ಎಸ್.ಆರ್. ಪ್ರಸಾದ್ ಹಾಗೂ ಪರ್ವತಾರೋಹಿ ಡಾ. ಉಷಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.ಮಹಾಜನ ಪಿಜಿ ಸೆಂಟರ್ ನಿರ್ದೇಶಕ ಡಾ.ಸಿ.ಕೆ. ರೇಣುಕಾರ್ಯ, ಟ್ರಿಪ್ ಡೋರ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ಅಂಜಲಿ ಸಮರ್ಥ್, ಸಹ ಸಂಸ್ಥಾಪಕ ಸಮರ್ಥ್ ವೈದ್ಯ, ನಟಿ ಶ್ವೇತಾ ಆರ್. ಪ್ರಸಾದ್, ವಿಪ್ರ ಪ್ರೊಫೆಶನಲ್ ಫೋರಂನ ಅಧ್ಯಕ್ಷ ಶ್ರೀನಿವಾಸ್ ಭಾಷ್ಯಂ, ಟ್ರಿಪ್ ಡೋರ್ ನ ಸೇಲ್ಸ್ ಡೈರೆಕ್ಟರ್ ಮೊಹಮದ್ ಸರ್ಫರಾಜ್ ಮೊದಲಾದಲರು ಇದ್ದರು.