ಸಾರಾಂಶ
ಬ್ಯಾಡ್ಮಿಂಟನ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಸರ್ಕಾರವು ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯ ನೀಡುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ದಶಕದ ಹಿಂದೆ ಬ್ಯಾಡ್ಮಿಂಟನ್ ನಲ್ಲಿ ಕೆಲವೇ ಮಂದಿ ಕ್ರೀಡಾಳುಗಳಿದ್ದರು. ಆದರೆ, ಈಗ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಸೇರಿದಂತೆ ನೂರಾರು ಮಾದರಿ ಕ್ರೀಡಾಪಟುಗಳಿದ್ದಾರೆ. ಅವರು ಸ್ಫೂರ್ತಿಯಾಗಬೇಕು. ಏಷ್ಯನ್, ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಬೇಕು. ಆ ಗುರಿ ಇರಿಸಿಕೊಂಡು ಅಭ್ಯಾಸ ಮಾಡಬೇಕು ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ನಿರ್ದೇಶಕಿ ಸಿಂಧೂ ಬಿ. ರೂಪೇಶ್ ಕರೆ ನೀಡಿದರು.ನಗರದ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲಾದಲ್ಲಿ ಶಾಲಾ ಶಿಕ್ಷಣ (ಪಿಯು) ಇಲಾಖೆಯು ಮಂಗಳವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ಎರಡು ದಿನದ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬಂದಿರುವ ಎಲ್ಲಾ ಕ್ರೀಡಾ ಸ್ಪರ್ಧಿಗಳು ಚೆನ್ನಾಗಿ ಆಡಿ ರಾಜ್ಯವನ್ನೂ ಪ್ರತಿನಿಧಿಸಬೇಕು. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು. ಬ್ಯಾಡ್ಮಿಂಟನ್ ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಸರ್ಕಾರವು ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯ ನೀಡುತ್ತಿದೆ. ಅದನ್ನು ಬಳಸಿಕೊಳ್ಳಬೇಕು ಎಂದರು.ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಬ್ಯಾಡ್ಮಿಂಟನ್ ತರಬೇತಿಗೆ ಉತ್ತಮ ಸೌಕರ್ಯ ಒದಗಿಸಲಾಗಿದೆ. ಅಲ್ಲದೆ, ಖಾಸಗಿ ತರಬೇತಿ ಅಕಾಡೆಮಿಗಳೂ ತೆರೆದಿವೆ. ಕ್ರೀಡಾಳುಗಳು ಗುರಿಯನ್ನು ಸೀಮಿತವಾಗಿಟ್ಟುಕೊಳ್ಳಬಾರದು. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಕ್ರೀಡೆಯು ಸಹಕಾರಿ. ಕ್ರೀಡಾಸ್ಫೂರ್ತಿಯಲ್ಲಿ ಆಡಬೇಕು. ಯಾವುದೇ ಕಾರಣಕ್ಕೂ ಕ್ರೀಡೆಯನ್ನೂ ಮಧ್ಯದಲ್ಲಿ ಬಿಡಬಾರದು. ಕೋರ್ಸ್ ಗಾಗಿ ಆಡಬಾರದು. ಜೀವನಕ್ಕಾಗಿ ಆಡಬೇಕು. ವೃತ್ತಿಪರರಂತೆ ಬ್ಯಾಡ್ಮಿಂಟನ್ ಕ್ರೀಡೆಯನ್ನು ಉಸಿರಾಗಬೇಕು ಎಂದು ಅವರು ಹೇಳಿದರು.ಇಲಾಖೆಯ ಸಹಾಯಕ ನಿರ್ದೇಶಕ ಸಿ.ಜಿ. ರಮೇಶ್ ಮಾತನಾಡಿ, ಮೈಸೂರಿನಲ್ಲಿ 10 ಸಾವಿರ ಕ್ರೀಡಾಪಟುಗಳಿಗೆ ಪಂದ್ಯಾವಳಿ ಆಯೋಜಿಸುವ ಸೌಕರ್ಯವಿದೆ. ಇಲ್ಲಿ ಕೆಲವೇ ಪಂದ್ಯಗಳು ನಡೆಯುತ್ತಿವೆ. ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ಅಲ್ಲದೆ ಕಬಡ್ಡಿ, ಕುಸ್ತಿ ಟೂರ್ನಿಗಳನ್ನು ಆಯೋಜಿಸುವತ್ತ ಯೋಜಿಸಲಾಗಿದೆ ಎಂದರು.ಇದೇ ವೇಳೆ ಪಂದ್ಯಾವಳಿಯನ್ನು ಮುನ್ನಡೆಸುವ ಎಲ್ಲಾ 66 ವ್ಯವಸ್ಥಾಪಕರನ್ನು ಸನ್ಮಾನಿಸಲಾಯಿತು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ಸ್ವಾಮಿ ಯುಕ್ತೇಶಾನಂದ, ಡಿಡಿಪಿಯುಗಳಾದ ಬಿ.ಆರ್. ಸಿದ್ದರಾಜು, ಎಂ. ಮರಿಸ್ವಾಮಿ, ರಾಮಕೃಷ್ಣ ವಿದ್ಯಾಶಾಲಾದ ಪ್ರಾಂಶುಪಾಲ ಟಿ.ಕೆ. ಚಂದ್ರಶೇಖರ್ ಮೊದಲಾದವರು ಇದ್ದರು.