ಉಜಿರೆ ರೈತ ಉತ್ಪಾದಕರ ಕಂಪನಿ ಉದ್ಘಾಟನೆ, ಷೇರು ಪ್ರಮಾಣ ಪತ್ರ ವಿತರಣೆ

| Published : Mar 26 2024, 01:16 AM IST

ಉಜಿರೆ ರೈತ ಉತ್ಪಾದಕರ ಕಂಪನಿ ಉದ್ಘಾಟನೆ, ಷೇರು ಪ್ರಮಾಣ ಪತ್ರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಭಾರತ ಸರ್ಕಾರದ ಅಂಗಸಂಸ್ಥೆಯಾದ ಎಸ್‌ಎಫ್‌ಎಸಿ ಅನುಮೋದನೆಗೊಂಡ ಉಜಿರೆ ರೈತ ಉತ್ಪಾದಕರ ಕಂಪನಿ ಉದ್ಘಾಟನಾ ಸಮಾರಂಭ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸೋಮವಾರ ಸಂಪನ್ನಗೊಂಡಿತು. ಕಂಪನಿಗೆ ಷೇರುದಾರರಾಗಲು ಉಜಿರೆ ಪರಿಸರದ ಯಾವುದೇ ರೈತರು ಅರ್ಜಿ ಫಾರಂ ಜತೆಗೆ ರೂ 1100 (ನೋಂದಣಿ ಶುಲ್ಕ ಸೇರಿ ) ಪಾವತಿಸಿ ಪಾಲುದಾರರಾಗಬಹುದು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಾಲಕ್ಕೆ ತಕ್ಕಂತೆ ಬದಲಾವಣೆಗೊಂಡು ಕೃಷಿಯಲ್ಲಿ ಹೊಸ ಆವಿಷ್ಕಾರ, ತಂತ್ರಜ್ಞಾನದ ಹೊಂದಾಣಿಕೆಯಲ್ಲಿ ತಮ್ಮ ಬೆಳೆಗಳಿಗೆ ನೇರ ಮಾರುಕಟ್ಟೆಯಿಂದ ಆದಾಯ ದ್ವಿಗುಣ ಗಳಿಸಲು ಎಲ್ಲರಿಗೂ ಉತ್ತಮ ಅವಕಾಶವಿದೆ ಎಂದು ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಇಕೋವ ಸಂಸ್ಥೆಯ ರಾಜ್ಯ ಯೋಜನಾ ಸಂಯೋಜಕ ತಿಪ್ಪೇಸ್ವಾಮಿ ಹೇಳಿದ್ದಾರೆ.ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಭಾರತ ಸರ್ಕಾರದ ಅಂಗಸಂಸ್ಥೆಯಾದ ಎಸ್‌ಎಫ್‌ಎಸಿ ಅನುಮೋದನೆಗೊಂಡ ಉಜಿರೆ ರೈತ ಉತ್ಪಾದಕರ ಕಂಪನಿ ಉದ್ಘಾಟನಾ ಸಮಾರಂಭ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ರೈತರು ಬೆಳೆಯುವ ಕಾಳುಮೆಣಸು, ರಬ್ಬರ್, ಅಡಕೆ, ತೆಂಗು ,ಗೇರು,ಮಾವು ಇತ್ಯಾದಿ ಬೆಳೆಗಳಿಗೆ ಸೂಕ್ತ ಮಾಹಿತಿ ಪಡೆದು ಬೆಳೆಗಳಿಗೆ ನೇರ ಮಾರುಕಟ್ಟೆ ಮೂಲಕ ಉತ್ತಮ ಬೆಲೆ ದೊರೆತು ,ಹೆಚ್ಚಿನ ಆದಾಯ ಪಡೆಯಬಹುದು. ನಾಸಿಕ್ ಜಿಲ್ಲೆಯ ಸಿನ್ಹಾರ್ ನಲ್ಲಿ ರೈತರೊಬ್ಬರು ಪಶು ಪಾಲನೆ, ಕುರಿ ಸಾಕಾಣಿಕೆಯಿಂದ ಹೆಚ್ಚಿನ ಆದಾಯ ಪಡೆದಿದ್ದಾರೆ. ರಾಣೆಬೆನ್ನೂರು, ಬಾಳೆಹೊನ್ನೂರುಗಳಲ್ಲಿ ಮೆಣಸು ಬೆಳೆಗಾರರು, ಶಿರಸಿಯ ಬನವಾಸಿಯಲ್ಲಿ ಇಬ್ಬರು ರೈತರು ಕಲ್ಲಂಗಡಿ ಬೆಳೆಯಿಂದ ಹೆಚ್ಚು ಲಾಭ ಪಡೆದಿದ್ದಾರೆ. . ಬೆಂಗಳೂರಿನ ಕೃಷಿಕರೊಬ್ಬರು ಜೀನಿ ಬೆಳೆಯಿಂದ ಅಭಿವೃದ್ಧಿ ಹೊಂದಿ 1200 ಕೆಲಸಗಾರರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ ಎಂದು ಅವರು ವಿವರಿಸಿದರು. ಪ್ರಧಾನಿ ಮೋದಿಯವರು ಇಂತಹ 10,000 ರೈತ ಉತ್ಪಾದಕರ ಸಂಘಗಳ ಸ್ಥಾಪನೆಗೆ ಮುಂದಾಗಿದ್ದಾರೆ. ರೈತರಿಗೆ ಮುಕ್ತ ಅವಕಾಶವಿದ್ದು ಯಂತ್ರೋಪಕರಣ ಖರೀದಿ, ಮೌಲ್ಯ ವರ್ಧನೆಗೆ ಬಡ್ಡಿರಹಿತ ಸಾಲ ಸೌಲಭ್ಯವಿದ್ದು ಕೇಂದ್ರ, ರಾಜ್ಯ ಸರ್ಕಾರಗಳು ಸಹಾಯಧನ ನೀಡುತ್ತಿದ್ದು,ರೈತರ ಲಾಭ ಕ್ಕೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು, ಕೃಷಿಕ ರೈತರ ಶ್ರೇಯೋಭಿವೃದ್ಧಿಗಾಗಿ ಆರಂಭಗೊಂಡ ಉತ್ಪಾದಕರ ಕಂಪನಿ ಷೇರುದಾರರ ಸಂಘಟನೆಯಿಂದ ಉತ್ತರೋತ್ತರ ಅಭಿವೃದ್ಧಿ ಹೊಂದಿ ಅವರ ಮುಂದಿನ ಬದುಕು ಸುಖ ಸಮೃದ್ಧಿಯಾಗಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಉಜಿರೆ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಜಿ. ಗಣೇಶ್ ಭಟ್ ಈಗಾಗಲೇ 35೦ ಮಂದಿ ಷೇರುದಾರರು ನೋಂದಾಯಿಸಿಕೊಂಡಿದ್ದು 1000 ಮಂದಿ ನೋಂದಾಯಿಸುವ ಗುರಿ ಹೊಂದಲಾಗಿದೆ. ಒಳ್ಳೆಯ ಮನಸ್ಸಿನಿಂದ ಕನಸು ನನಸಾಗಿಸಲು ಕಂಪನಿಯನ್ನು ಭದ್ರಪಡಿಸಲು ಎಲ್ಲರು ಕೈಜೋಡಿಸಿ ,ಯೋಜನೆಯನ್ನು ಇತರರಿಗೆ ತಲುಪಿಸಿ ಸಂಸ್ಥೆಯ ಬಲವರ್ಧನೆಗೆ ತೊಡಗಿಸಿಕೊಳ್ಳಬೇಕು. ಸಂಸ್ಥೆ ಶಾಶ್ವತವಾಗಿ ಬೆಳೆದು ಉಳಿಯಲು ನೀರೆರೆದು ಪೋಷಿಸಬೇಕು. ಅದರ ಅಮೃತ ಫಲವನ್ನು ನಾವೆಲ್ಲರೂ ಜತೆಯಾಗಿ ಪಡೆಯೋಣ ಎಂದರು. ಕಂಪನಿಗೆ ಷೇರುದಾರರಾಗಲು ಉಜಿರೆ ಪರಿಸರದ ಯಾವುದೇ ರೈತರು ಅರ್ಜಿ ಫಾರಂ ಜತೆಗೆ ರೂ 1100 (ನೋಂದಣಿ ಶುಲ್ಕ ಸೇರಿ ) ಪಾವತಿಸಿ ಪಾಲುದಾರರಾಗಬಹುದು ಎಂದರು. ರೈತರಿಗೆ ಜೂನ್ ತಿಂಗಳಲ್ಲಿ ಪ್ರವಾಸ ಏರ್ಪಡಿಸಬೇಕೆಂದು ತಿಮ್ಮಪ್ಪ ಗೌಡ ಬೆಳಾಲು ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಇಕೋವಾ ಸಂಸ್ಥೆಯ ಸಂಯೋಜಕ ಡಿಕೆಸಿ, ಸಹಸಂಯೋಜಕ ಧರ್ಮೇಂದ್ರ ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಸ್ವಾಗತಿಸಿದರು. ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ್ ನಿರೂಪಿಸಿದರು. ನಿರ್ದೇಶಕ ಸೀತಾರಾಮ ಶೆಟ್ಟಿ ಕೇಂಬರ್ಜೆ ವಂದಿಸಿದರು. ನಿರ್ದೇಶಕರಾದ ಜಯಂತ ಗೌಡ, ಚಂದ್ರಶೇಖರ ಗೌಡ, ಸಂಜೀವ ನಾಯ್ಕ್, ಪುಷ್ಪ ಜಿ.ಡಿ. ಡಿ, ಶಿವಾನಂದ ಮಯ್ಯ ಮತ್ತು ಉಜಿರೆ ಪರಿಸರದ ರೈತರು ಹಾಜರಿದ್ದರು. ರೈತರಿಗೆ ಬೇಕಾಗುವ ಉಪಯುಕ್ತ ಕೃಷಿ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಷೇರುದಾರರ ನೋಂದಾವಣೆ ನಡೆಯಿತು. ಕಾರ್ಯಕ್ರಮದಲ್ಲಿ ಷೇರುಪತ್ರ ಬಿಡುಗಡೆಗೊಳಿಸಲಾಯಿತು.