20ರಂದು ಕಟೀಲಿನಲ್ಲಿ ವಿಜ್ಞಾನ ವನ ಶಕ್ತಿ-೨.೦ ಉದ್ಘಾಟನೆ

| Published : Nov 19 2024, 12:52 AM IST

20ರಂದು ಕಟೀಲಿನಲ್ಲಿ ವಿಜ್ಞಾನ ವನ ಶಕ್ತಿ-೨.೦ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವೀಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್‌ನ ವೈಜ್ಞಾನಿಕ ಪ್ರಯೋಗಗಳ ಅಪೂರ್ವ ಯೋಜನೆ ‘ವಿಜ್ಞಾನವನ ಶಕ್ತಿ ೨.೦’ ನ.20ರಂದು ಉದ್ಘಾಟನೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವೀಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್‌ನ ವೈಜ್ಞಾನಿಕ ಪ್ರಯೋಗಗಳ ಅಪೂರ್ವ ಯೋಜನೆ ‘ವಿಜ್ಞಾನವನ ಶಕ್ತಿ ೨.೦’ ನ.20ರಂದು ಉದ್ಘಾಟನೆಗೊಳ್ಳಲಿದೆ.ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜೀ ಉದ್ಘಾಟಿಸಲಿದ್ದು, ಕಟೀಲು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಸನತ್‌ಕುಮಾರ ಶೆಟ್ಟಿ ಕೊಡೆತ್ತೂರು ಗುತ್ತು, ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕ್ಯಾಪ್ಸ್ ಫೌಂಡೇಷನ್‌ನ ಚಂದ್ರಶೇಖರ ಶೆಟ್ಟಿ, ಅಮನ್ ಶೆಟ್ಟಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಡಾ. ಕೃಷ್ಣ ಕಾಂಚನ್, ನಾಗೇಶ್ ರಾವ್ ಅವರಿಗೆ ಸನ್ಮಾನ ನಡೆಯಲಿದೆ.ಸಿಎ ಚಂದ್ರಶೇಖರ್ ಶೆಟ್ಟಿ ನೇತೃತ್ವದಲ್ಲಿ ಕಟೀಲು ವಿದ್ಯಾಸಂಸ್ಥೆಯಲ್ಲಿ ೨೫ ಲಕ್ಷ ರು. ವೆಚ್ಚದಲ್ಲಿ ಸೈನ್ಸ್ ಪಾರ್ಕ್ ಉದ್ಘಾಟನೆಗೊಂಡಿತ್ತು. ಹೊರಾಂಗಣದಲ್ಲಿ ನಿರ್ಮಾಣವಾಗಿರುವ ವಿಜ್ಞಾನವನದಲ್ಲಿ ೨೯ ವಿವಿಧ ಮಾದರಿಗಳಿಂದ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಕಲಿಸುವ ವಿಶಿಷ್ಟ ಕಲ್ಪನೆಯ ಯೋಜನೆ ಇದಾಗಿತ್ತು. ಇದೀಗ ಕ್ಯಾಪ್ಸ್ ಫೌಂಡೇಷನ್ ಈ ವಿಜ್ಞಾನ ವನವನ್ನು ಮತ್ತೆ ೨೦ ಲಕ್ಷ ರು.ನಲ್ಲಿ ವಿಸ್ತರಿಸಿದ್ದು, ಹೊಸದಾಗಿ ೨೨ ಉಪಕರಣಗಳನ್ನು ಅಳವಡಿಸಿದೆ. ಈಗ ೫೧ ಮಾದರಿಗಳಿಂದ ವಿಸ್ತಾರಗೊಂಡಿರುವ ವಿಜ್ಞಾನವನ ಎರಡನೇ ಹಂತದ ಉದ್ಘಾಟನೆಗೆ ಸಿದ್ಧವಾಗಿದೆ. ಕಟೀಲಿನ ಈ ವಿಜ್ಞಾನವನಕ್ಕೆ ಬರುವ ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರು ಯಂತ್ರಗಳ ಮಾಹಿತಿ ಅವುಗಳ ಉಪಯೋಗಗಳನ್ನು ತಿಳಿಸಿಕೊಡುತ್ತಾರೆ. ಕಟೀಲು ಶಾಲೆಗಳ ವಿದ್ಯಾರ್ಥಿಗಳಲ್ಲದೆ ಇತರ ಶಾಲೆಗಳ ವಿದ್ಯಾರ್ಥಿಗಳಿಗೂ ಇಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡವಲ್ಲದೆ ರಾಜ್ಯದ ಹದಿನಾರು ಜಿಲ್ಲೆಗಳ ೨೧೨ ಶಾಲೆಗಳ ೧೦೬೩೪ ವಿದ್ಯಾರ್ಥಿಗಳು ಈ ವಿಜ್ಞಾನವನಕ್ಕೆ ಭೇಟಿ ನೀಡಿದ್ದಾರೆ.ಏನೇನೆಲ್ಲ ಇವೆ?ಗ್ರಹಗಳ ಚಲನೆ, ರಾಟೆಗಳು, ಮಳೆ ಮಾಪಕ, ಬಾರ್ಟ್‌ನ ಲೋಲಕಗಳು, ಸೈಕ್ಲೋಯ್ಡಲ್ ಮಾರ್ಗ, ಸುಳಿ, ಗರಿಷ್ಟ ಕನಿಷ್ಟ ಥರ್ಮಾ ಮೀಟರ್, ಗಾಳಿ ಚೀಲ, ಜಲ ವಿದ್ಯುತ್ ಸ್ಥಾವರ, ಪರವಲಯವನ್ನು ಹಾದು ಹೋಗುವ ಸರಳ ರೇಖೆ, ಪೈಥಾಗರಸ್ ಪ್ರಮೇಯ, ಪರವಲಯ ಪ್ರತಿಫಲಕ, ವಿಶ್ವ ಸಮಯ, ಶಕ್ತಿ ಸಂರಕ್ಷಣೆ, ಕನ್ನಡಿಗಳೊಂದಿಗೆ ಆಟ, ತರಂಗ ಚಲನೆ, ಉರುಳುವ ಚಕ್ರ, ದೃಷ್ಟಿಯ ನಿರಂತರತೆ, ನ್ಯೂಟನ್‌ನ ಬಣ್ಣದ ತಟ್ಟೆ, ಡಿಎನ್‌ಎ, ದ್ವಿಶಂಕು, ಸರಳ ಬಿಂಬಗ್ರಾಹಿ ಇವೆಲ್ಲ ಹೊಸದಾಗಿ ಸೇರ್ಪಡೆಗೊಂಡ ಮಾಡೆಲ್‌ಗಳು. ಪುಲ್ಲಿ ಸಿಸ್ಟಮ್, ಗೇರ್‌ನ ವೈವಿಧ್ಯಗಳು, ಸೋಲಾರ್ ವಾಟರ್ ಹೀಟರ್, ಅಟೋಮೊಬೈಲ್ ಮಾಡೆಲ್ ಹೀಗೆ ನಾನಾ ಮಾಡೆಲ್‌ಗಳು ಈ ಹಿಂದೆ ವಿಜ್ಞಾನವನದಲ್ಲಿ ಸ್ಥಾಪನೆಗೊಂಡಿದ್ದವು.