ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಹಕಾರ ಬ್ಯಾಂಕ್‌ಗಳು ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಸರ್ಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿವೆ. ಜನರ ವಿಶ್ವಾಸ ಗಳಿಸಿ ಮುನ್ನಡೆಯುತ್ತಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಹೊಂದಿ ಜನರಿಗೆ ಸೇವೆ ನೀಡುವಂತಾಗಲಿ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.ನಗರದ ಪುರಭವನದಲ್ಲಿ ಭಾನುವಾರ ಮಂಗಳೂರಿನ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ‘ಸ್ವರ್ಣ ಸಂಭ್ರಮ - ಸ್ವರ್ಣ ಜಯಂತಿ’ ವರ್ಷದ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಹಾಗೂ 49ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ವಿಶ್ವಕರ್ಮ ಸಮಾಜ ಪ್ರಾಮಾಣಿಕ ಸಮಾಜವಾಗಿದ್ದು, ದೇವಸ್ಥಾನ ನಿರ್ಮಾಣ, ಶಿಲ್ಪಕಲೆ, ಚಿನ್ನದ ಕೆಲಸದ ಮೂಲಕ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್, 49 ವರ್ಷಗಳ ಇತಿಹಾಸ ಹೊಂದಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಒಳ್ಳೆಯ ರೀತಿಯಲ್ಲಿ ನಡೆದು ಬಂದ ಕಾರಣ ಈಗ ಸ್ವರ್ಣ ಜಯಂತಿ ಆಚರಿಸುತ್ತಿದೆ. ವಿಶ್ವಕರ್ಮ ಸಮುದಾಯಕ್ಕೆ ಸಮಾಜದಲ್ಲಿ ವಿಶೇಷ ಗೌರವವಿದ್ದು, ಬ್ಯಾಂಕ್‌ನ ಸ್ವರ್ಣ ಜಯಂತಿಯ ಎಲ್ಲ ಯೋಜನೆ, ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ. ಮುಂದಿನ ಒಂದು ವರ್ಷದಲ್ಲಿ ಬ್ಯಾಂಕ್‌ನ ವ್ಯವಹಾರ ದ್ವಿಗುಣಗೊಳ್ಳಲಿ ಎಂದು ಶುಭ ಹಾರೈಸಿದರು.ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ, ವಿಶ್ವಕರ್ಮ ಸಹಕಾರ ಬ್ಯಾಂಕ್ ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮುನಿಯಾಲ್ ದಾಮೋದರ ಆಚಾರ್ಯ,ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬೋಳಾರ ಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲೀಕ ಬಿ. ಪ್ರವೀಣ್ ಶೇಟ್ ನಾಗ್ವೇಕರ್, ಮುನಿಯಾಲು ಸಂಜೀವಿನ ಫಾರ್ಮ್ಸ್ ಸವಿತಾ ರಾಮಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.ಈ ಸಂದರ್ಭ ಬ್ಯಾಂಕ್‌ನ ಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು. ಸ್ವರ್ಣ ಸಂಭ್ರಮದ ಲೋಗೋ ಬಿಡುಗಡೆಗೊಳಿಸಲಾಯಿತು. ಸ್ವರ್ಣ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳನ್ನು ಅನಾವರಣ ಮಾಡಲಾಯಿತು.ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್. ಹರೀಶ್ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಜಗದೀಶ ಆಚಾರ್ಯ, ಎಂಡಿ ವಸಂತ ಅಡ್ಯಂತಾಯ, ಬ್ಯಾಂಕ್‌ನ ನಿರ್ದೇಶಕರು ಇದ್ದರು. ನಿರ್ದೇಶಕ ಭರತ್ ನಿಡ್ಪಳ್ಳಿ ವಂದಿಸಿದರು. ವಾರುಣಿ ಆಚಾರ್ಯ ನಿರೂಪಿಸಿದರು.
ಸ್ವರ್ಣ ಸಂಭ್ರಮ ಸುಭದ್ರಾ ಯೋಜನೆ: ಡಾ. ಹರೀಶ್ ಆಚಾರ್ಯವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್. ಹರೀಶ್ ಆಚಾರ್ಯ ಪ್ರಾಸ್ತಾವಿಕದಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ನೇತೃತ್ವದಲ್ಲಿ 1976ರಲ್ಲಿ ದಿ ಮಂಗಳೂರು ಗೋಲ್ಡ್‌ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿ ಎಂಬ ಹೆಸರಿನಲ್ಲಿ ಆರಂಭಗೊಂಡ ಸಂಸ್ಥೆ 2000ದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಹೆಸರಿನಲ್ಲಿ ರೂಪಾಂತರ ಹೊಂದಿತು. ಮುಂದಿನ ಒಂದು ವರ್ಷಗಳ ಕಾಲ ಸ್ವರ್ಣ ಸಂಭ್ರಮದ ಅಂಗವಾಗಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ಬ್ಯಾಂಕ್‌ನ ಸದಸ್ಯರು ಮರಣ ಹೊಂದಿದಲ್ಲಿ ಕುಟುಂಬಕ್ಕೆ 10 ಸಾವಿರ ರು. ನೀಡುವ ಮರಣ ಸಾಂತ್ವನ ಯೋಜನೆ, ಬ್ಯಾಂಕ್ ಸದಸ್ಯರಿಗೆ 2 ಲಕ್ಷ ರು.ಗಳ ಅಪಘಾತ ಸಾಂತ್ವನ ವಿಮಾ ಯೋಜನೆ, ಕುಶಲಕರ್ಮಿ ಸದಸ್ಯರಿಗೆ 2 ಲಕ್ಷ ರು. ವರೆಗೆ ಒಡಿ ಸೌಲಭ್ಯ, ಬ್ಯಾಂಕ್‌ನ ಐದು ಶಾಖೆಗಳಲ್ಲಿ 50 ವಾರ ತಲಾ 50 ಸ್ವಚ್ಛ ಭಾರತ್ ಕಾರ್ಯಕ್ರಮ, ಸ್ವರ್ಣ ಸಂಭ್ರಮ ಸುಭದ್ರಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.