ಸಾರಾಂಶ
ಪಟ್ಟಣದ ಕೆಎಲ್ ವಿ ವೃತ್ತದಲ್ಲಿ ನೀರಿನ ಕಾರಂಜಿ- ಹೈಮಾಸ್ಕ್ ದೀಪ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಗತಕಾಲದ ವೈಭವ ಮರುಕಳಿಸುವಂತೆ ಪುರಸಭೆ ಆಡಳಿತ ಮರು ನಿರ್ಮಿಸಿದ ನೀರಿನ ಕಾರಂಜಿ ವೃತ್ತದ ಲೋಕಾರ್ಪಣೆ ಇತಿಹಾಸದ ಸ್ಮರಣೀಯ ಕಾರ್ಯಕ್ರಮ ಎಂದು ಶಾಸಕ ಕೆ.ಎಸ್. ಆನಂದ್ ವರ್ಣಿಸಿದರು. ಪಟ್ಟಣದ ಕೆಎಲ್ ವಿ ವೃತ್ತದಲ್ಲಿ ಪುರಸಭೆಯಿಂದ ಆಯೋಜಿಸಿದ್ದ ನೀರಿನ ಕಾರಂಜಿ ಹಾಗೂ ಹೈಮಾಸ್ಕ್ ದೀಪ ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೆರೆಸದೆ ಅಭಿವೃದ್ಧಿಗೆ ಒತ್ತು ನೀಡಿ ಮಾಡುವ ಸಣ್ಣ ಸಣ್ಣ ಸಮಾಜ ಮುಖಿ ಕೆಲಸಗಳಿಗೆ ಜನತೆ ಮೆಚ್ಚಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.
ಅಮೃತ್ 2 ಯೋಜನೆಯಡಿ ₹65 ಕೋಟಿ ಅನುದಾನ ಮಂಜೂರಾಗಿದ್ದು, ಪಟ್ಟಣದಲ್ಲಿ ಡೆಲ್ಟ್ ಯೋಜನೆಯಡಿ ₹1.16 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಯುಜಿಡಿಗೆ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಪ್ರಾರಂಭಿಕವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ₹35 ಕೋಟಿ ಅನುದಾನ ಬಿಡುಗಡೆ ಆಗಿದೆ. ಕಡೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ನನ್ನ ನಿರಂತರ ಶ್ರಮ ಮತ್ತು ಆಧ್ಯತೆ ಇದ್ದು, ಪಟ್ಟಣದ ಅಭಿವೃದ್ದಿಗೆ ನನ್ನೆಲ್ಲಾ ಸಹಕಾರವನ್ನು ಪುರಸಭೆಗೆ ನೀಡುತ್ತೇನೆ ಎಂದರು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ದೂರ ದೃಷ್ಟಿಯ ಚಿಂತನೆಯೊಂದಿಗೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪುರಸಭಾ ನಿಧಿಯಿಂದ ₹1ಕೋಟಿಗೂ ಹೆಚ್ಚಿನ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಕಡೂರು- ಬೀರೂರು ಪಟ್ಟಣಕ್ಕೆ ಮಂಜೂರಾಗಿದ್ದ ₹10 ಕೋಟಿ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಹಿಂಪಡೆದಿತ್ತು. ಆಗ ಶಾಸಕರಾಗಿದ್ದ ಬೆಳ್ಳಿಪ್ರಕಾಶ್ ಈ ಅನುದಾನ ಉಳಿಸಿಕೊಟ್ಟರು. ಜೊತೆಯಲ್ಲಿ ನಗರೋತ್ಥಾನ ಅನುದಾನ ಮಂಜೂರು ಮಾಡಿಸಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಇದೇ ರೀತಿ ₹1.25 ಕೋಟಿ ವಿಶೇಷ ಅನುದಾನ ವಾಪಸ್ಸಾ ದುದನ್ನು ನಮ್ಮ ಶಾಸಕ ಕೆ.ಎಸ್.ಆನಂದ್ ಅದನ್ನು ಮರುಬಿಡುಗಡೆ ಮಾಡಿಸಿದರು. ಈ ಹಿಂದೆ ಅವಳಿ ಪಟ್ಟಣದ ಪುರಸಭೆ ಅಭಿವೃದ್ಧಿಗೆ ಮಾಜಿ ಶಾಸಕ ವೈ.ಎಸ್.ವಿ. ದತ್ತ ಸಹಕಾರವನ್ನೂ ಸ್ಮರಿಸುತ್ತೇನೆ ಎಂದರು. ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ, ಅನೇಕ ಹಿರಿಯ ಪೂರ್ವಿಕರ ಶ್ರಮದಿಂದ ಕೆ ಎಲ್ ವಿ ವೃತ್ತ ಸ್ಥಾಪನೆ ಗೊಂಡು ತನ್ನದೇ ಆದ ಹಿರಿಮೆ ಹೆಚ್ಚಿಸಿಕೊಂಡಿದೆ.ಈ ವೃತ್ತ ಇತಿಹಾಸ ಹೊಂದಿದೆ. ಪಟ್ಟಣದ ಯಾವುದಾದರೂ ವೃತ್ತಕ್ಕೆ ಭದ್ರಾ ನೀರನ್ನು ತಂದ ದಿ.ಶಾಸಕ ಕೆ.ಎಂ.ಕೃಷ್ಣಮೂರ್ತಿ ಅವರ ಹೆಸರಿನೊಂದಿಗೆ ಪುತ್ತಳಿ ಸ್ಥಾಪನೆಗೆ ಶಾಸಕರು ಒತ್ತು ನೀಡಬೇಕೆಂದು ಮನವಿ ಮಾಡಿದರು. ಹಿರಿಯ ಪುರಸಭಾ ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ಶಿವಮೊಗ್ಗ-ಬೆಂಗಳೂರು ರಾ.ಹೆ. ಹಾದು ಹೋಗುವ ಕೆಎಲ್ ವಿ ವೃತ್ತ ನಿರ್ಮಾಣವಾಗುವಲ್ಲಿ ಅಂದಿನ ಪುರಸಭೆ ಅಧ್ಯಕ್ಷ ಜಿ.ಸೋಮಯ್ಯ ಪ್ರಮುಖ ಪಾತ್ರ ವಹಿಸಿದ್ದರು. ಕೆಎಲ್ ವಿ ಶ್ರೇಷ್ಟಿಗಳ ಕುಟುಂಬದ ಸದಸ್ಯರ ಮನವೊಲಿಸುವ ಮೂಲಕ ವೃತ್ತ ನಿರ್ಮಾಣವಾಯಿತು. ಅದಕ್ಕೆ ಕಾರಣರಾದವರನ್ನು ನಾವು ಸ್ಮರಿಸಬೇಕು ಎಂದರು. ಪುರಸಭಾ ಮಾಜಿ ಆಧ್ಕ್ಷಕ್ಷ ಕೆ.ಮೂರ್ತಿರಾವ್ ಮಾತನಾಡಿ, ಐತಿಹಾಸಿಕ ಮಾಜಿ ವೃತ್ತ ವೀರೇಂದ್ರ ಪಾಟೀಲರಿಂದ ಉದ್ಘಾಟನೆ ಆಗಿತ್ತು. ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಹ ಸದಸ್ಯರೊಂದಿಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಇಂದು ಹಿಂದಿನ ಗತ ವೈಭವಾ ಮರುಕಳಿಸಿದೆ. ಪಟ್ಟಣದ ಜನತೆ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.ಪುರಸಭಾ ಸದಸ್ಯ ಸೈಯ್ಯದ್ ಯಾಸೀನ್ ಮಾತನಾಡಿ, ಪುರಸಭೆ ಕಂದಾಯ ವಸೂಲಾತಿಯಲ್ಲಿಯೇ ಅಭಿವೃದ್ಧಿ ಕಾರ್ಯಗಳಿಗೆ ಪುರಸಭಾ ಆಡಳಿತ ಮಂಡಳಿ ಮೂಲಭೂತ ಸೌಕರ್ಯವನ್ನು ನಾಗರಿಕರಿಗೆ ನೀಡುವ ಜೊತೆಗೆ ವೇದಾ ಪಾರ್ಕ್, ಹಿಂದೂ ರುದ್ರ ಭೂಮಿ ಸೇರಿದಂತೆ ರಸ್ತೆ ಅಗಲೀಕರಣದಂತಹ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಪದ್ಮಾಶಂಕರ್, ಮರುಗುದ್ದಿ ಮನು, ಸುಬ್ಬಣ್ಣ, ಗೋವಿಂದರಾಜ್, ಸುಧಾ ಉಮೇಶ್, ಕಮಲಾ ವೆಂಕಟೇಶ್, ಯತಿರಾಜ್, ಪುಷ್ಪಲತಾ ಮಂಜುನಾಥ್, ಭಾಗ್ಯಮ್ಮ, ಮಂಡಿ ಇಕ್ಬಾಲ್, ವಿಜಯಾ ಚಿನ್ನರಾಜು, ಮೋಹನ್, ಹಾಲಮ್ಮ ಸಿದ್ರಾಮಪ್ಪ, ಮಾಜಿ ಅಧ್ಯಕ್ಷ ಕೆ. ಮೂರ್ತಿರಾವ್, ಮಾಜಿ ಉಪಾಧ್ಕ್ಷಕ್ಷ ರಾಜೇಶ್, ಮುಖಂಡ ರಾದ ಕಂಸಾಗರ ರೇವಣ್ಣ, ಕೆ.ಎಸ್.ತಿಪ್ಪೇಶ್,ನಾಗರಾಜ್, ಶಂಕರ್, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ತಿಮ್ಮಯ್ಯ, ಶ್ರೇಯಸ್ ಸೇರಿದಂತೆ ಪುರಸಭಾ ಸಿಬ್ಬಂದಿ, ಸಾರ್ವಜನಿಕರು ಇದ್ದರು. 5.ಕೆಕೆಡಿಯು1.
ಕಡೂರು ಪಟ್ಟಣದಲ್ಲಿ ಪುರಸಭಾ ನಿಧಿಯಿಂದ ಪುನಶ್ಚೇತನಗೊಂಡ ಕೆಎಲ್ ವಿ ವೃತ್ತದ ನೀರಿನ ಕಾರಂಜಿಯನ್ನು ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ಮಂಜುಳಾ ಚಂದ್ರು, ತೋಟದ ಮನೆ ಮೋಹನ್, ಪುರಸಭಾ ಸದಸ್ಯರುಗಳು ಇದ್ದರು.