ಕುಮಟಾದಲ್ಲಿ ಯಕ್ಷ ಚಿಗುರು ಯಕ್ಷಗಾನ ಕಲಿಕಾ ಕೇಂದ್ರದ ಉದ್ಘಾಟನೆ

| Published : Nov 13 2024, 12:10 AM IST

ಕುಮಟಾದಲ್ಲಿ ಯಕ್ಷ ಚಿಗುರು ಯಕ್ಷಗಾನ ಕಲಿಕಾ ಕೇಂದ್ರದ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನ ನಾಡಿನ ಶ್ರೇಷ್ಠ ಕಲೆಗಳಲ್ಲೊಂದು. ಈ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕೆ ಬೇಕಾದ ಸಹಕಾರ ಎಲ್ಲರೂ ನೀಡಬೇಕಿದೆ.

ಕುಮಟಾ: ಜಿಲ್ಲೆಯಲ್ಲಿ ಹಿಂದೆ ಹಲವಾರು ಯಕ್ಷಗಾನ ಮೇಳಗಳಿದ್ದವು. ಅದೆಲ್ಲವೂ ಈಗ ಉಳಿದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಉಳಿಯಲು ಅಲ್ಲಿನ ದೇವಾಲಯಗಳು ಕಾರಣ. ಅವರದ್ದೇ ಮೇಳಗಳು ಇರುವುದಿಂದ ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಮೇಳಗಳು ಉಳಿದುಕೊಂಡಿವೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿ ಇಂತಹ ಯಕ್ಷಗಾನ ಕಲಿಕಾ ಕೇಂದ್ರಗಳ ಮೂಲಕವಾದರೂ ಯಕ್ಷಗಾನ ಕಲೆ ಉಳಿಯುವಂತಾಗಬೇಕಿದೆ ಎಂದು ಯಕ್ಷಗಾನದ ಪ್ರಸಿದ್ಧ ಕಲಾವಿದ ಸತ್ಯನಾರಾಯಣ ಹಾಸ್ಯಗಾರ ಕರ್ಕಿ ತಿಳಿಸಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಪಿಎಲ್‌ಡಿ ಬ್ಯಾಂಕ್ ಸಭಾಭವನದಲ್ಲಿ ಯಕ್ಷಗುರುಗಳಾದ ಸರ್ವೇಶ್ವರ ಹೆಗಡೆ ಮೂರೂರು ಹಾಗೂ ಗಜಾನನ ಹೆಗಡೆ ಸಾಂತೂರು ಇವರ ನೇತೃತ್ವದಲ್ಲಿ ನೂತನವಾಗಿ ಸ್ಥಾಪಿಸಿರುವ ಯಕ್ಷ ಚಿಗುರು ಯಕ್ಷಗಾನ ಕಲಿಕಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ, ಯಕ್ಷಗಾನ ನಾಡಿನ ಶ್ರೇಷ್ಠ ಕಲೆಗಳಲ್ಲೊಂದು. ಈ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕೆ ಬೇಕಾದ ಸಹಕಾರ ಎಲ್ಲರೂ ನೀಡಬೇಕಿದೆ. ಯಕ್ಷಗಾನ ಕಲಿಕಾ ಕೇಂದ್ರಗಳು ಉತ್ತರ ಕನ್ನಡದಲ್ಲೂ ಹೆಚ್ಚೆಚ್ಚು ನಡೆದು ಇಂಥ ಕಲಿಕಾ ಕೇಂದ್ರಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಹೊರಹೊಮ್ಮುವಂತಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ, ಯಕ್ಷಗಾನ ಕಲಿಕಾ ಕೇಂದ್ರಗಳು ನಿರಂತರವಾಗಿ ನಡೆಯಬೇಕು. ಇಂಥ ಹಲವು ಕೇಂದ್ರಗಳಾಗಿ, ಅತ್ಯುತ್ತಮ ಕಲಾವಿದರನ್ನು ಸಿದ್ಧಪಡಿಸಿ ಯಕ್ಷಗಾನ ಕ್ಷೇತ್ರಕ್ಕೆ ನೀಡಲಿ ಎಂದರು. ಯಕ್ಷಗಾನ ಸಂಶೋಧನಾ ಕೇಂದ್ರದ ಸಂಸ್ಥಾಪಕ ಡಾ. ಜಿ.ಎಲ್. ಹೆಗಡೆ, ಎಂ.ಜಿ. ಭಟ್, ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಹೆಗಡೆ ಮೂರೂರು, ಗಜಾನನ ಹೆಗಡೆ ಸಾಂತೂರು ಇದ್ದರು.ಕಲಿಕಾ ಕೇಂದ್ರದ ಗುರುಗಳಾದ ಸರ್ವೇಶ್ವರ ಹೆಗಡೆ ಮೂರೂರು ಸ್ವಾಗತಿಸಿದರು. ವಿನಾಯಕ ಭಟ್ ಭಂಡಿವಾಳ ನಿರೂಪಿಸಿದರು. ವಸಂತ ಭಟ್ ತುಬ್ಲೇಮಠ ವಂದಿಸಿದರು.

ಕಮರಗಾಂವ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಮನವಿ

ಕಾರವಾರ: ತಾಲೂಕಿನ ಗೋಟೆಗಾಳಿ ಗ್ರಾಪಂ ವ್ಯಾಪ್ತಿಯ ಕಮರಗಾಂವ ಗ್ರಾಮಕ್ಕೆ ವಿದ್ಯುತ್ ಇಲ್ಲದೇ ಹಲವು ತಿಂಗಳು ಕಳೆದಿದ್ದು, ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂಗೆ ಸೂಚಿಸಬೇಕು ಎಂದು ಬಿಜೆಪಿ ಗ್ರಾಮೀಣ ಘಟಕದಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.

ಮಳೆಗಾಲದ ಅವಧಿಯಲ್ಲಿ ಭಾರಿ ಗಾಳಿ ಮಳೆಗೆ ೮- ೧೦ ವಿದ್ಯುತ್ ಕಂಬ ಮುರಿದುಬಿದ್ದಿದೆ. ಒಂದು ಟ್ರಾನ್ಸಫರ್ಮರ್ ಹಾಳಾಗಿದೆ. ಹೆಸ್ಕಾಂ ಗಮನಕ್ಕೆ ತಂದರೆ ಇಲಾಖೆಯಲ್ಲಿ ಹಣವಿಲ್ಲವೆಂದು ಕೈಚೆಲ್ಲಿ ಕುಳಿತಿದ್ದಾರೆ. ಐದಾರು ತಿಂಗಳಿನಿಂದ ಈ ಗ್ರಾಮದ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ವಿದ್ಯುತ್ ಕಂಬ ಅಳವಡಿಸಿ, ಟಿಸಿ ದುರಸ್ತಿ ಮಾಡಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.ಕಮರಗಾಂವಗೆ ತೆರಳಲು ಗೋಯರ ಸೇತುವೆಯಿಂದ ಅವಕಾಶವಿದ್ದು, ಆದರೆ ರಸ್ತೆ ಸರಿಯಿಲ್ಲದೇ ತೊಂದರೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಹೋದರೆ ೧೬- ೧೮ ಕಿಮೀ ಆಗುತ್ತದೆ. ಆದರೆ ಈ ರಸ್ತೆ ಸರಿಯಿಲ್ಲದೇ ಗೋವಾದ ಮೂಲಕ ೮೦ ಕಿಮೀ ಸುತ್ತುವರಿದು ಬರಬೇಕು. ಪ್ರತಿ ತಿಂಗಳು ಪಡಿತರ ಪಡೆಯಲು ಗೋವಾ ಮೂಲಕ ಬರಬೇಕಿದ್ದು, ಸುತ್ತುವರಿದು ಬರಬೇಕಾದ ಕಾರಣ ವಾಹನ ಬಾಡಿಗೆಗಾಗಿ ₹೫ ಸಾವಿರ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಆರು ತಿಂಗಳ ಪಡಿತರವನ್ನು ಒಮ್ಮೆಲೆ ಕೊಡುವಂತೆ ಆಗಬೇಕು ಅಥವಾ ಗೋಯರ ಬಳಿ ರಸ್ತೆ ನಿರ್ಮಿಸಿಕೊಡಬೇಕು ಎಂದು ಕೋರಿದರು.ಈ ಗ್ರಾಮದಲ್ಲಿ ೩೮ ಕುಟುಂಬಗಳಿದ್ದು, ಶುದ್ಧ ಕುಡಿಯುವ ನೀರಿನ ಸಮಸ್ಯೆಯಿದೆ. ಎಲ್ಲ ಮನೆಯವರೂ ಹಳ್ಳದಿಂದ ನೀರನ್ನು ತರುವ ಪರಿಸ್ಥಿತಿಯಿದೆ. ಈ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಬೇಕು ಎಂದರು. ಗೋಟೆಗಾಳಿ ಗ್ರಾಪಂ ಸದಸ್ಯ ಅನಿಲ ಗಾಂವಕರ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ ಗುನಗಿ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಮೊದಲಾದವರು ಇದ್ದರು.