ಸಾರಾಂಶ
ಯಲಬುರ್ಗಾ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಜಿಲ್ಲೆಯಲ್ಲೇ ಸಾರ್ವಜನಿಕರಿಗೆ ಅತ್ಯಂತ ಗುಣಮಟ್ಟ ಉತ್ತಮ ಸೇವೆ ನೀಡುವ ಮೂಲಕ ಮಾದರಿ ಆಸ್ಪತ್ರೆಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಘಟಕದ ಸುಸಜ್ಜಿತವಾದ ಕಟ್ಟಡದಲ್ಲಿ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕ ಬಸವರಾಜ ರಾಯರಡ್ಡಿ ಅವರು ಈ ಆಸ್ಪತ್ರೆ ನಿರ್ಮಿಸಿ ಸಾಕಷ್ಟು ಬಡರೋಗಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಇನ್ನೂ ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ನೀಡುವಲ್ಲಿ ಇಲ್ಲಿನ ವೈದ್ಯರ ಕಾರ್ಯವನ್ನು ಎಂದೂ ಮರೆಯಲೂ ಸಾಧ್ಯವಿಲ್ಲ ಎಂದರು.ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ. ಶಿವನಗೌಡ ದಾನರಡ್ಡಿ ಮಾತನಾಡಿ, ಯಲಬುರ್ಗಾ ಕ್ಷೇತ್ರದ ಪ್ರತಿಯೊಂದು ಗ್ರಾಪಂಗಳಲ್ಲಿ ಆರೋಗ್ಯ ಕೇಂದ್ರಗಳು ನಿರ್ಮಿಸಲಾಗಿದ್ದು, ಗ್ರಾಮೀಣ ಪ್ರದೇಶಗಳ ಜನರಿಗೆ ಹೆಚ್ಚು ಉಪಯುಕ್ತವಾಗಿದೆ. ಇಲ್ಲಿಯ ರೋಗಿಗಳು ಹುಬ್ಬಳ್ಳಿ, ಗದಗ, ಹೊಸಪೇಟೆ, ಧಾರವಾಡದಂತಹ ಆಸ್ಪತ್ರೆಗೆ ಹೋಗುವ ಬದಲು ಇಲ್ಲಿಯೇ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಶಾಸಕ ರಾಯರಡ್ಡಿ ಅವರ ಕೊಡುಗೆ ಸಾಕಷ್ಟಿದೆ. ಜತೆಗೆ ಪ್ರಯೋಗಾಲಯ ಪ್ರಾರಂಭದಿಂದ ಹೆಚ್ಚು ಲಾಭವಾಗಲಿದೆ. ಉಚಿತ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಬಹುದು, ಅಲ್ಲದೇ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.
ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೃಷ್ಣ ಹೊಟ್ಟಿ ಮಾತನಾಡಿ, ಪಟ್ಟಣದ ಆಸ್ಪತ್ರೆಯ ಅಭಿವೃದ್ಧಿಗೆ ಶಾಸಕ ಬಸವರಾಜ ರಾಯರಡ್ಡಿ ಅವರು ಆದ್ಯತೆ ನೀಡಿದ್ದು, ಪ್ರಯೋಗಾಲಯ ಬಡಜನತೆಗೆ ವರದಾನವಾಗಿದೆ ಎಂದರು.ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ. ಪ್ರಕಾಶ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾ. ಅಮರೇಶ ನಾಗರಾಳ, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ, ಜಿಲ್ಲಾ ಸದಸ್ಯರಾದ ಮಲ್ಲಿಕಾರ್ಜುನ ಜಕ್ಕಲಿ, ಮುಖಂಡ ಹಂಪಯ್ಯ ಹಿರೇಮಠ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಶಿಧರ ಉಳ್ಳಾಗಡ್ಡಿ, ಅಬ್ದುಲ್ ಮುನಾಫ್ ಮಂಕದಾರ, ವಿ.ಎಸ್. ಶಿವಪ್ಪಯ್ಯನಮಠ, ಪ್ರಕಾಶ ಚಲವಾದಿ ಇದ್ದರು.