ಸಾರಾಂಶ
ಯಲ್ಲಾಪುರ: ಇಲ್ಲಿಯ ತಾಪಂ ಆವಾರದಲ್ಲಿ ನವೀಕೃತ ಹವಾನಿಯಂತ್ರಿತ ಸಭಾಭವನವನ್ನು ಸೋಮವಾರ ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಲ್ಲಿ ಮಾಡಿದಾಗ ಮಾತ್ರ ಬಹುದಿನಗಳ ಕಾಲ ಉಳಿಯುತ್ತದೆ ಎಂದು ಹೇಳಿದರು.
ಹಿಂದೆ ಅಧಿಕಾರಿಗಳು ತಪ್ಪು ಮಾಡಿದಾಗ ಮಾಧ್ಯಮಗಳಲ್ಲಿ ವರದಿ ಬಂದರೆ ಅವರಿಗೆ ಭಯ ಇರುತ್ತಿತ್ತು. ಇಂದು ಅಂತಹ ಭಯದ ವಾತಾವರಣ ಇಲ್ಲವಾಗಿದೆ. ಆದ್ದರಿಂದ ಹಿಂದಿನ ಸ್ಥಿತಿ ಬರಬೇಕಾಗಿದೆ. ಅಧಿಕಾರಿಗಳಿರಲಿ, ಯಾರೇ ಇರಲಿ, ತಪ್ಪು ಮಾಡಿದವರ ವಿರುದ್ಧ ಮಾಧ್ಯಮಗಳು ನಿರ್ದಾಕ್ಷಿಣ್ಯವಾಗಿ ವರದಿ ಮಾಡಲಿ. ಅಂತಹ ವರದಿಗೆ ನಾವು ಕೂಡಾ ಬೆಂಬಲಿಸುತ್ತೇವೆ ಎಂದರು.ಪಂಚಾಯತ್ ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಜಿಪಂ, ತಾಪಂ ಚುನಾವಣೆ ಆಗದೇ ಇರುವುದರಿಂದ ಎಲ್ಲ ಜನಪ್ರತಿನಿಧಿಗಳ ಹೊಣೆಗಾರಿಕೆಯನ್ನು ಶಾಸಕರೇ ನಿರ್ವಹಿಸಬೇಕಾಗಿದೆ. ತಾಂತ್ರಿಕ ಕಾರಣದಿಂದ ಕೇಂದ್ರದಿಂದ ಬರಬೇಕಾದ ಮೂರು ಸಾವಿರ ಕೋಟಿ ರು. ಬಂದಿಲ್ಲ. ಮುಖ್ಯಮಂತ್ರಿಗಳು ಆ ಹಣಕ್ಕೆ ಬೇರೆ ವ್ಯವಸ್ಥೆ ಮಾಡಲೇಬೇಕಾಗಿದೆ. ಪ್ರತಿವರ್ಷ ಮಾರ್ಚ್‌ನಲ್ಲಿ ಸಾವಿರಾರು ಕೋಟಿ ಹಣ ಲ್ಯಾಪ್ಸ್ ಆಗುತ್ತದೆ. ನಮ್ಮ ಅಧಿಕಾರಿಗಳ ಅಸಮರ್ಪಕ ಕಾರ್ಯಗಳಿಂದಾಗಿ ಕಾಮಗಾರಿಯು ಪೂರ್ತಿಗೊಳ್ಳದೇ ಇರುವುದು ಹಣ ಲ್ಯಾಪ್ಸ್ ಆಗುವುದಕ್ಕೆ ಕಾರಣ. ಅಭಿವೃದ್ಧಿಗೆ ಹಲವು ರೀತಿಯ ತೊಡಕುಗಳಿಂದಾಗಿ ಹಿನ್ನಡೆಯಾಗುತ್ತಿದೆ. ಆದರೂ ಕ್ಷೇತ್ರದಲ್ಲಿ ಶಾಸಕ ಹೆಬ್ಬಾರ್ ಅವರಿಗೆ ಸಂಪನ್ಮೂಲ ತರುವ ಶಕ್ತಿಯಿದೆ. ಅದನ್ನು ಸಮರ್ಥವಾಗಿ ವಿನಿಯೋಗ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಹಸೀಲ್ದಾರ್ ತನುಜಾ ಸವದತ್ತಿ, ತಾಪಂ ಆಡಳಿತಾಧಿಕಾರಿ ನಟರಾಜ ಬಿ., ತಾಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ಹೆಗಡೆ ಉಪಸ್ಥಿತರಿದ್ದರು.