ಸಾರಾಂಶ
ಬೆಂಗಳೂರು ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ವಾರದಲ್ಲೇ ನಗರದ ಉಷ್ನಾಂಶ ತೀವ್ರವಾಗಿ ಕುಸಿದು, ವಾತಾವರಣ ತಣ್ಣಗಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾದು ಕೆಂಡದಂತಾಗಿದ್ದ ರಾಜಧಾನಿ ಬೆಂಗಳೂರು ಕೇವಲ ಒಂದೇ ಒಂದು ವಾರದಲ್ಲಿ ಕೂಲ್.. ಕೂಲ್.. ಆಗಿದ್ದು, ಚಳಿಯ ವಾತಾವರಣ ಸೃಷ್ಟಿಯಾಗಿದೆ.ಕಳೆದ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ನಗರದಲ್ಲಿ ದಾಖಲೆಯ ಪ್ರಮಾಣ ಬಿಸಿಲು ಕಂಡು ಬಂದಿತ್ತು. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿತ್ತು. ಬಿಸಿಲಿನ ತಾಪಕ್ಕೆ ಬೆಂಗಳೂರಿನ ಜನರು ತತ್ತರಿಸಿ ಹೋಗಿದ್ದರು. ಉತ್ತರ ಕರ್ನಾಟಕದ ಜಿಲ್ಲೆಗಳಂತೆ ಸಿಲಿಕಾನ್ ಸಿಟಿ ಬೆಂಗಳೂರು ಬಾಸವಾಗುತ್ತಿತ್ತು.
ಜನರು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳು ಸಹ ಬಿಸಿಲ ತಾಪಕ್ಕೆ, ಬಿಸಿಗಾಳಿ, ಸೆಕೆಗೆ ನಲುಗಿ ಹೋಗಿದ್ದವು. ಒಂದೇ ವಾರದಲ್ಲಿ ಇಡೀ ಬೆಂಗಳೂರಿನ ವಾತಾವರಣವೇ ಬದಲಾಗಿ ಹೋಗಿದೆ.ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ವರದಿಯಾಗುತ್ತಿದೆ. ಹೀಗಾಗಿ, ಬೆಂಗಳೂರು ಸಂಪೂರ್ಣವಾಗಿ ತಂಪಾಗಿದೆ.
ಹತ್ತು ದಿನದ ಹಿಂದೆ ಎಸಿ, ಫ್ಯಾನ್ ಮತ್ತು ಕೂಲರ್ ಇಲ್ಲದೇ ಇರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದೀಗ ಮೈ ತುಂಬಾ ಬೆಚ್ಚನೆಯ ಉಡುಪು ಬೇಕು ಅನಿಸುವ ವಾತಾವರಣ ಸೃಷ್ಟಿಯಾಗಿದೆ.ಸುಮಾರು 10 ಡಿಗ್ರಿ ಇಳಿಕೆಏಪ್ರಿಲ್ ಕೊನೆಯ ವಾರದಲ್ಲಿ ನಿರಂತರವಾಗಿ 37 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗಿತ್ತು. ಮಳೆಯಿಂದ ಇದೀಗ 27 ರಿಂದ 28 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ 10 ಡಿಗ್ರಿ ಸೆಲ್ಶಿಯಸ್ ನಷ್ಟು ಬಿಸಿಲು ಕಡಿಮೆಯಾಗಿದೆ. ಗರಿಷ್ಠ ಉಷ್ಣಾಂಶ ಮಾತ್ರವಲ್ಲದೇ ಕನಿಷ್ಠ ಉಷ್ಣಾಂಶದಲ್ಲಿಯೂ ಇಳಿಕೆಯಾಗಿದೆ.
ನಗರದಲ್ಲಿ 33.3 ಡಿಗ್ರಿ ಸೆಲ್ಶಿಯಸ್ ಮೇ ತಿಂಗಳ ವಾಡಿಕೆಯ ಗರಿಷ್ಠ ಉಷ್ಣಾಂಶವಾಗಿದ್ದು, 21.7 ಡಿಗ್ರಿ ಸೆಲ್ಶಿಯಸ್ ಕನಿಷ್ಠ ವಾಡಿಕೆ ಉಷ್ಣಾಂಶವಾಗಿದೆ. ಮಂಗಳವಾರ ಬೆಂಗಳೂರು ನಗರದಲ್ಲಿ 31.4 ಡಿಗ್ರಿ ಸೆಲ್ಶಿಯಸ್ ಗರಿಷ್ಠ, 20.2 ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ 2 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶ ಹಾಗೂ 1.8 ಕನಿಷ್ಢ ಉಷ್ಣಾಂಶದಲ್ಲಿ ಕಡಿಮೆ ದಾಖಲಾಗಿದೆ.