ಭಟ್ಕಳದಲ್ಲಿ ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ

| Published : Jul 17 2024, 12:48 AM IST / Updated: Jul 17 2024, 12:49 AM IST

ಸಾರಾಂಶ

ಹೆಬಳೆ ಗ್ರಾಮದ ಹೊನ್ನಿಗದ್ದೆ ನಿವಾಸಿ ಸುಕ್ರಯ್ಯ ದುರ್ಗಪ್ಪ ನಾಯ್ಕ ಮನೆಯ ಅಡುಗೆ ಕೋಣೆಯ ಚಾವಣಿ ಮೇಲೆ ಮರ ಬಿದ್ದು ಭಾಗಶಃ ಹಾನಿ

ಭಟ್ಕಳ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಗಳವಾರ ಬೆಳಗ್ಗೆಯವರೆಗೆ ತಾಲೂಕಿನಲ್ಲಿ 165 ಮಿಮೀ ಮಳೆಯಾಗಿದ್ದು, ಇಲ್ಲಿಯ ತನಕ ಒಟ್ಟೂ 2586.8 ಮಿಮೀ ಮಳೆ ಸುರಿದಿದೆ. ಸೋಮವಾರ ರಾತ್ರಿ ಎರಡು ತಾಸುಗಳ ಕಾಲ ಸತತ ಮಳೆ ಸುರಿದಿದ್ದು, ಭಟ್ಕಳದ ಪಟ್ಟಣದ ಮುಖ್ಯರಸ್ತೆ, ಹಳೇ ಬಸ್ ನಿಲ್ದಾಣ, ಸಂಶುದ್ದೀನ ವೃತ್ತ, ರಂಗಿನಕಟ್ಟೆ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮಳೆ ನೀರು ಹರಿದು ಹೊಳೆಯಾಗಿತ್ತು. ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿದ್ದರಿಂದ ಸಂಚರಿಸಲು ವಾಹನ ಸವಾರರು ಪರದಾಡುವಂತಾಯಿತು. ರಂಗಿನಕಟ್ಟೆ ಹೆದ್ದಾರಿಯಲ್ಲಿ ಭಾರೀ ಮಳೆಗೆ ರಾತ್ರಿ ಇಡೀ ನೀರು ತುಂಬಿಕೊಂಡಿತ್ತು.

ಭಾರೀ ಗಾಳಿ ಮಳೆಗೆ ತಾಲೂಕಿನ ಕೋಟಖಂಡ ಕಲ್ಲಬ್ಬೆಯ ಲಕ್ಷ್ಮೀ ಮಾದೇವ ಬಾಂದಿ ಅವರ ಮನೆಯ ಅಡುಗೆ ಕೋಣೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ.

ಹೆಬಳೆ ಗ್ರಾಮದ ಹೊನ್ನಿಗದ್ದೆ ನಿವಾಸಿ ಸುಕ್ರಯ್ಯ ದುರ್ಗಪ್ಪ ನಾಯ್ಕ ಮನೆಯ ಅಡುಗೆ ಕೋಣೆಯ ಚಾವಣಿ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಮುಂಡಳ್ಳಿ ಗ್ರಾಮದ ಹಾವಳಿಕಂಠ ನಿವಾಸಿ ಶ್ರೀಧರ ಮಾಸ್ತಿ ಮೊಗೇರ ಮನೆಯ ಮೇಲೆ ಕಾಡು ಮರ ಬಿದ್ದು ಭಾಗಶಃ ಹಾನಿಯಾಗಿದೆ. ಶಿರಾಲಿಯ ಅಣ್ಣಪ್ಪ ಮಾಸ್ತ ದೇವಾಡಿಗ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಹಾಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಮಂಡಳ ಕಟ್ಟಡವೂ ಮಳೆಗೆ ಸಂರ್ಪೂರ್ಣ ಕುಸಿದಿದೆ.

ಕೊಪ್ಪ ಗ್ರಾಮದ ಬಸ್ತಿಗದ್ದೆ ನಿವಾಸಿ ನಾಗಪ್ಪ ನಾರಾಯಣ ನಾಯ್ಕ ಮನೆಯ ಚಾವಣಿ ಹಾಗೂ ಮಣ್ಣಿನ ಗೋಡೆ ಮಳೆಗೆ ಕುಸಿದಿದೆ. ಹಾನಿಗೀಡಾದ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.