ಸಾರಾಂಶ
ಕಾರಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
ಕನ್ನಡಪ್ರಭ ವಾರ್ತೆ ಕಾರಟಗಿ
ತಾಲೂಕಿನ ವ್ಯಾಪ್ತಿಯ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಹಿಂಗಾರು ಮಳೆ ಹಿನ್ನೆಲೆಯಲ್ಲಿ ಬೆಳೆಗಳು ಕೀಟಬಾಧೆಗೆ ತುತ್ತಾಗಿದ್ದು, ಕೀಟ ನಿರ್ವಹಣೆ ಮತ್ತು ಹತೋಟಿಗಾಗಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ತಾಲೂಕಿನ ಕೃಷಿ ಇಲಾಖೆ ಅಧಿಕಾರಿಗಳು ಶನಿವಾರ ವಿವಿಧ ಗ್ರಾಮಗಳಿಗೆ ತೆರಳಿ ಬೆಳೆಗಳ ಪರಿಶೀಲನೆ ನಡೆಸಿ, ರೈತರಿಗೆ ಮಾರ್ಗದರ್ಶನ ನೀಡಿದರು.ಕಾರಟಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ ರ‍್ಯಾವಳದ ಮತ್ತು ಸಿಬ್ಬಂದಿ ಶುಕ್ರವಾರ ಮತ್ತು ಶನಿವಾರ ಕಾರಟಗಿ ತಾಲೂಕಿನ ಬೂದಗುಂಪಾ, ತಿಮ್ಮಾಪುರ, ಹಾಲಸಮುದ್ರ, ಯರಡೋಣಾ, ರ‍್ಲಾನಹಳ್ಳಿ, ಹುಳ್ಕಿಹಾಳ, ಬೇವಿನಾಳ, ಮೈಲಾಪುರ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.ಕಳೆದ ಹತ್ತು ದಿನಗಳಿಂದೀಚಿಗೆ ನಿರಂತರವಾಗಿ ಹಿಂಗಾರು ಮಳೆ ಸುರಿಯುತ್ತಿದೆ. ಅಷ್ಟೇ ಅಲ್ಲ, ಬಹುತೇಕ ಸಮಯ ಮೋಡ ಕವಿದ ವಾತಾವರಣವೂ ಇದೆ. ಬತ್ತದಲ್ಲಿ ಕಣಿನೊಣ ಕೀಟ ಬಾಧೆ ಆವರಿಸುವ ಸಾಧ್ಯತೆ ಇದೆ. ಆ ಕಾರಣಕ್ಕೆ ಇಂದು ಇಲಾಖೆ ಕಡೆಯಿಂದ ಕಣಿ ನೊಣ ಕೀಟ ಹಾನಿ ಮತ್ತು ಹತೋಟಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ರೈತರಿದ್ದಲ್ಲಿಗೆ ತೆರಳಿ ಮಾಹಿತಿ ನೀಡಲಾಯಿತು.
ಜತೆಗೆ ಆ ಕೀಟಗಳ ನಿರ್ವಹಣೆಗಾಗಿ ರೈತರು ಫಿಫ್ರೋನಿಲ್ ೧.೦ ಮಿ.ಲೀ. ಅಥವಾ ಥಯೋಮಿಥಾಕ್ಸಮ್ ೦.೨ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬತ್ತದಲ್ಲಿ ಸತತವಾಗಿ ನೀರು ನಿಲ್ಲುವುದರಿಂದ ಎಲೆ ಕವಚದ ಮಚ್ಚೆ ರೋಗ ಕಂಡು ಬರುವ ಸಾಧ್ಯತೆ ಇದ್ದು, ಇದರ ನಿರ್ವಹಣೆಗಾಗಿ ೧.೦ ಮಿ.ಲೀ. ಹೆಕ್ಸಾಕೋನಜೋಲ್ ಪ್ರತಿ ಲೀಟರ್ ನೀರಿಗೆ ೧ ಮಿಲೀ ಬೆರೆಸಿ ಸಿಂಪಡಿಸಬೇಕು. ಇದರಿಂದ ಎಲೆ ಕವಚದ ರೋಗ ನಿವಾರಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಬತ್ತದಲ್ಲಿ ಬೆಂಕಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ನಿರ್ವಹಣೆಗಾಗಿ ಟ್ರೈಸೈಕ್ಲಾಜೋಲ್ ೦.೬ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದರು.ರೈತರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಮಾಹಿತಿ ನೀಡಿದರು. ಆತ್ಮಕ್ಷೇತ್ರ ಸಿಬ್ಬಂದಿ ದೀಪಾ, ಮರುಡಪ್ಪ ಕೃಷಿ ಸಂಜೀವಿನಿ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.