ಮಧುಗಿರಿಯಲ್ಲಿ ನಿರಂತರ ಜಡಿ ಮಳೆಗೆ ಜನ, ಜಾನುವಾರು ಹೈರಾಣ

| Published : Oct 17 2024, 12:02 AM IST / Updated: Oct 17 2024, 12:03 AM IST

ಮಧುಗಿರಿಯಲ್ಲಿ ನಿರಂತರ ಜಡಿ ಮಳೆಗೆ ಜನ, ಜಾನುವಾರು ಹೈರಾಣ
Share this Article
  • FB
  • TW
  • Linkdin
  • Email

ಸಾರಾಂಶ

ಮಧುಗಿರಿಯಲ್ಲಿ ವರುಣಾರ್ಭಟ ಮುಂದುವರಿದಿದ್ದು ರೈತರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಕಂಗಲಾಗಿದ್ದಾರೆ. ಜನತೆ ಹೊರಗೆ ಬರಲಾರದೆ ಬಹುತೇಕ ಎಲ್ಲ ಕೃಷಿ ಚಟುವಟಿಕೆಗಳು, ಕೈ ಕಸುಬುಗಳು ದಿಢೀರನೇ ನಿಂತು ಹೋಗಿ ನಿತ್ಯದ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

ಮುಂದುವರಿದ ವರುಣಾರ್ಭಟ । ರೈತರು, ಕೂಲಿ ಕಾರ್ಮಿಕರು ಕಂಗಾಲು । ನಿತ್ಯದ ಜೀವನ ನಿರ್ವಹಣೆ ತೊಂದರೆ । ಮಧುಗಿರಿ ರಸ್ತೆಗಳು ಜಲಾವೃತ

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನಲ್ಲಿ ವರುಣಾರ್ಭಟ ಮುಂದುವರಿದಿದ್ದು ರೈತರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಕಂಗಲಾಗಿದ್ದಾರೆ. ಜನತೆ ಹೊರಗೆ ಬರಲಾರದೆ ಬಹುತೇಕ ಎಲ್ಲ ಕೃಷಿ ಚಟುವಟಿಕೆಗಳು, ಕೈ ಕಸುಬುಗಳು ದಿಢೀರನೇ ನಿಂತು ಹೋಗಿ ನಿತ್ಯದ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಈ ಜಡಿ ಮಳೆಯಿಂದಾಗಿ ರೈತರು ಸಾಕಿರುವ ಕುರಿ, ಮೇಕೆ ಹಾಗೂ ದನಕರುಗಳಿಗೆ ಮೇವು ಹೊಂದಿಸಲಾಗದೇ ಪರದಾಡುವ ದೃಶ್ಯ ಮನ ಕಲಕುವಂತಿದೆ.

ಒಂದು ಕಡೆ ಅತಿವೃಷ್ಟಿ ಮ್ತತೊಂದು ಕಡೆ ಅನಾವೃಷ್ಟಿಗೆ ರೈತರು ಸಿಲುಕಿ ಹೈರಾಣಾಗಿದ್ದಾರೆ. ತಾಲೂಕಿನಲ್ಲಿ ಆರ್ಥಿಕವಾಗಿ ಹಣ ತಂದು ಕೊಡುವ ಶೇಂಗಾ ಬೆಳೆ ಈ ಸಲ ಹೆಚ್ಚು ಇಳುವರಿ ಬರುತ್ತದೆ ಎಂಬ ಕನಸು ಕಂಡಿದ್ದ ರೈತರಿಗೆ ನಿರಾಸೆಯಾಗಿದೆ. ಕಾಯಿ ಕಟ್ಟುವ ಹಂತದಲ್ಲಿ ಅಂದರೆ ಗೌರಿ ಹಬ್ಬದ ವೇಳೆಗೆ ಮಳೆರಾಯ ಸಂಪೂರ್ಣ ಕೈ ಕೊಟ್ಟಿದ್ದರಿಂದ ಶೇಂಗಾ ಬೆಳೆ ಇಳುವರಿ ಬಾರದೇ ಕಟಾವು ಮಾಡಿದ್ದ ಶೇಂಗಾ ಬಳ್ಳಿ ಜಮೀನುಗಳಲ್ಲಿಯೇ ಕೊಳೆಯ ತೊಡಗಿತು. ಅಲ್ಲಿಗೆ ರೈತರು ಉತ್ತಿ ಬತ್ತಿದ್ದ ಬೀಜ ಗೊಬ್ಬರ ಸಹ ಕೈಗೆ ಸಿಗದೇ ಜಳ್ಳು ಶೇಂಗಾ ಮಾರುಕಟ್ಟೆಗೆ ತಂದು ಬಿಕರಿ ಮಾಡುವಂತಾಗಿದೆ.

ಇನ್ನೂ ಮುಸುಕಿನಜೋಳ ರಾಗಿ ಬೆಳೆಗಳು ಹೊಲಗಳಲ್ಲಿಯೇ ಮೊಳಕೆ ಹೊಡೆಯುವಂತಾಗಿದೆ. ಇತ್ತ ದನ ಕರುಗಳ ಮೇವಿಗೆ ಶೇಂಗಾ ಬಳ್ಳಿ ಅನುಕೂಲವಾಗುತ್ತದೆ ಎಂದುಕೊಂಡಿದ್ದ ರೈತನಿಗೆ ಈಗ ಸುರಿಯುತ್ತಿರುವ ಜಡಿ ಮಳೆಗೆ ಎಲ್ಲ ಶೇಂಗಾ ಮೇವು ಕಪ್ಪಾಗಿ ಹೊಲದಲ್ಲಿಯೇ ಕೊಳೆಯುತ್ತಿದೆ.ಇನ್ನೂ ಈ ಜಡಿ ಮಳೆಗೆ ಕೆಲವು ಬೆಳೆಗಳು ನೀರಿಡಿದು ಹಾನಿಗೆ ಒಳಗಾಗಿ ಅವಾಸನದತ್ತ ಸಾಗಿವೆ.

ವರುಣಾರ್ಭಟಕ್ಕೆ ಮಧುಗಿರಿ ಪಟ್ಟಣದ ರಸ್ತೆಗಳು ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶದ ಕೆಲವು ರಸ್ತೆಗಳು ಸಹ ಅಲ್ಲಲ್ಲಿ ಕಿತ್ತು ಹೋಗಿವೆ. ಶಂಕರ್‌ ಟಾಕೀಸ್‌ ರಸ್ತೆ, ತುಮಕೂರು ಗೇಟ್‌ ಬಳಿ ರಸ್ತೆ, ನೃಪತುಂಗ ಸರ್ಕಲ್‌ ಬಳಿ ರಸ್ತೆ, ದಂಡೂರು ಬಾಗಿಲು ಸಮೀಪದ ರಸ್ತೆಗಳು ಗುಂಡಿ ಬಿದ್ದು ಪ್ರಯಾಣಿಕರಿಗೆ ಸವಾರರಿಗೆ ತೊಂದರೆ ಉಂಟಾಗಿದೆ. ಜಿಲ್ಲಾಡಳಿತ ಇನ್ನೂ 5 ದಿನ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿದ್ದು ಆರೆಂಜ್‌, ಯಲ್ಲೋ ಅಲರ್ಟ್‌ ಘೋಷಿಸಿದೆ. ಹಾಗಾಗಿ ಮಕ್ಕಳು, ಯುವಕರು ಅಪಾಯವಿರುವ ಸೇತುವೆ, ನದಿಗಳ ಸಮೀಪ ಸೆಲ್ಪಿ ಪೋಟೋ ತೆಗೆದುಕೊಳ್ಳದಂತೆ ಕಟ್ಟಾಜ್ಞೆ ಹೊರಡಿಸಿದೆ.

ಪೋಷಕರು ಮಕ್ಕಳಿಗೆ ಶಾಲಾ -ಕಾಲೇಜುಗಳು ರಜೆ ಇರುವುದರಿಂದ ತಮ್ಮ ಮಕ್ಕಳನ್ನು ಕೆರೆ ಕೋಡಿ, ಬಾವಿ, ಕಲ್ಯಾಣಿಗಳತ್ತ ಬಿಡದಂತೆ ಮುನ್ನಚ್ಚರಿಕೆ ವಹಿಸಬೇಕಿದೆ. ಈ ಜಡಿ ಮಳೆಗೆ ತಾಲೂಕಿನಲ್ಲಿ ಮೂರು ಮನೆಗಳು ಹಾನಿಗೊಳಗಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಕೊಡಿಗೇನಹಳ್ಳಿ ಹೋಬಳಿ ಅಡವಿನಾಗೇನಹಳ್ಳಿಯಲ್ಲಿ ಎರೆಡು ವಾಸದ ಮನೆಗಳು, ಐ.ಡಿ.ಹಳ್ಳಿ ಹೋಬಳಿಯ ದಾದಗೊಂಡನಹಳ್ಳಿಯಲ್ಲಿ ಒಂದು ವಾಸದ ಮನೆಯ ಗೋಡೆ ಕುಸಿತವಾಗಿದೆ. ನಿರಂತರವಾಗಿ ಎಡಬಿಡದೆ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಜನರು ಮನೆ ಬಿಟ್ಟು ಹೊರಗೆ ಬಂದಿಲ್ಲ.