ಸಾರಾಂಶ
ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಬಿಜೆಪಿ ಕಾರ್ಯಕರ್ತರಿಂದ ಅಡ್ಡಿ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿನ ಗುಂಡುರಾವ್ ಬಡಾವಣೆಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಉದ್ಘಾಟನೆಗೆಶಾಸಕ ಶಾಸಕ ಮಂತರ್ ಗೌಡ ಆಗಮಿಸಿದ್ದರು. ಆಗ ಬಿಜೆಪಿ ಕಾರ್ಯಕರ್ತರು, ಅವೈಜ್ಞಾನಿಕವಾಗಿ ಅಂಗನವಾಡಿ ಕಟ್ಟಡದ ತಡೆಗೋಡೆಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದರು.2021- 22ನೇ ಸಾಲಿನಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಗುಂಡುರಾವ್ ಬಡಾವಣೆಯಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಕ್ಕೆ ತಡೆಗೋಡೆ ನಿರ್ಮಿಸದೆ ಇದ್ದರೂ ಮಾರ್ಚ್ ತಿಂಗಳಲ್ಲಿ ಬಿಲ್ ಪಾವತಿ ಆಗಿರುವ ಬಗ್ಗೆ ಗ್ರಾಪಂ ಸದಸ್ಯ ಎಸ್.ಎನ್. ರಘು ಆರೋಪಿಸಿ ತನಿಖೆಗೆ ಆಗ್ರಹಿಸಿದ್ದರು. ಈ ಸಂಬಂಧ ಕಟ್ಟಡ ನಿರ್ಮಾಣದ ಓರ್ವ ಎಜಿನಿಯರ್ ಅಮಾನತುಗೊಳಿಸಲಾಗಿದೆ. ತನಿಖೆ ಕಾರ್ಯ ನಡೆಯುತ್ತಿರುವುದರಿಂದ ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡುವುದು ಸರಿ ಇಲ್ಲ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತ ಮತ್ತು ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎನ್. ರಘು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅನಂತ್ ಕುಮಾರ್ ಅವರು ಶಾಸಕರಿಗೆ ತಿಳಿಸಿದರು.
ಈ ವೇಳೆ ಶಾಸಕ ಮಂಥರ್ ಗೌಡ ಮಾತನಾಡಿ, ಮಾರ್ಚ್ ತಿಂಗಳಲ್ಲಿ ಬಿಲ್ ಆಗಿರುವ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಸಿದ್ಧಪಡಿಸಿದ ಯೋಜನಾ ವರದಿಯಂತೆ ತಡೆಗೋಡೆ ನಿರ್ಮಾಣವಾಗದಿದ್ದರೆ ತಡೆಗೋಡೆಯನ್ನು ತೆರವುಗೊಳಿಸಿ ನಿಯಮದಂತೆ ಮರುನಿರ್ಮಾಣ ಮಾಡಲು ಆದೇಶಿಸುತ್ತೇನೆ. ಆದರೆ ಇಲ್ಲಿನ ಬಡ ಮಕ್ಕಳಿಗೆ ಅಂಗನವಾಡಿ ಕೇಂದ್ರವು ಅವಶ್ಯಕತೆ ಇರುವುದನ್ನು ಮನಗೊಂಡು ಉದ್ಘಾಟನೆ ಮಾಡಲು ಬಂದಿರುವುದಾಗಿ ಮನವರಿಕೆ ಮಾಡಿದರು.ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು. ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಬಳಿಕ ಅಂಗನವಾಡಿ ಕೇಂದ್ರವನ್ನು ಶಾಸಕರು ಉದ್ಘಾಟಿಸಿದರು.