ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಡಕಾಯಿತಿ ಪ್ರಕರಣದ ಮಹಜರ್ ನಡೆಸುವ ವೇಳೆ ಪೊಲೀಸರ ಮೇಲೆ ಬಿಯರ್ ಬಾಟಲಿಯಿಂಜದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಹಿಡಿದಿರುವ ಘಟನೆ ಮೈಸೂರು ತಾಲೂಕಿನಲ್ಲಿ ಗೋಪಾಲಪುರ ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ.ಕೇರಳ ರಾಜ್ಯದ ಲೇಟ್ ಮುತ್ತು ಎಂಬವರ ಪುತ್ರ ಎಂ. ಆದರ್ಶ ಅ. ಮುರುಗನ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈತನು ನಡೆಸಿದ ದಾಳಿಯಲ್ಲಿ ಜಯಪುರ ಠಾಣೆಯ ಎಸ್ಐ ಪ್ರಕಾಶ್ ಯತ್ತಿಮನಿ ಮತ್ತು ಸಿಬ್ಬಂದಿ ಹರೀಶ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.ಮೈಸೂರು ತಾಲೂಕಿನ ಗುಜ್ಜೇಗೌಡನಪುರ ಗ್ರಾಮದ ಬಳಿ ಕಳೆದ ಜ.20 ರಂದು ಕೇರಳ ಉದ್ಯಮಿಯೊಬ್ಬರ ಕಾರು ಅಡ್ಡಗಟ್ಟಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ. ಆದರ್ಶ, ವಿಜೇಶ್ ಮತ್ತು ಶ್ರೀಜಿತ್ ಎಂಬವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು.ಡಕಾಯಿತಿ ನಂತರ ಆರೋಪಿಗಳು ಗೋಪಾಲಪುರ ಗ್ರಾಮದ ಬಳಿ ಒಂದು ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಈ ಸ್ಥಳ ಪರಿಶೀಲನೆಗಾಗಿ ಶುಕ್ರವಾರ ರಾತ್ರಿ ಹೋಗಿದ್ದಾಗ, ರೋಪಿ ಆದರ್ಶನು ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಸ್ಥಳದಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯಿಂದ ಜಯಪುರ ಠಾಣೆ ಎಸ್ಐ ಪ್ರಕಾಶ್ ಯತ್ತಿಮನಿ ಮತ್ತು ಸಿಬ್ಬಂದಿ ಹರೀಶ್ ಅವರಿಗೆ ಬಾಟಲಿ ಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ಈ ವೇಳೆ ಸ್ಥಳದಲ್ಲಿದ್ದ ಮೈಸೂರು ಗ್ರಾಮಾಂತರ ಸಿಪಿಐ ಶಿವನಂಜಶೆಟ್ಟಿ ಅವರು ತಮ್ಮ ಪಿಸ್ತೂಲಿನಿಂದ ಗಾಳಿಯಲ್ಲಿ 1 ಗುಂಡು ಹಾರಿಸಿದ್ದಾರೆ. ಜೊತೆಯಲ್ಲಿದ್ದ ಬೈಲಕುಪ್ಪೆ ಸಿಪಿಐ ದೀಪಕ್ ಅವರು ತಮ್ಮ ಪಿಸ್ತೂಲಿನಿಂದ ಆರೋಪಿ ಆದರ್ಶನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಪೊಲೀಸರು ಮತ್ತು ಆರೋಪಿಯನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಆರೋಪಿ ಆದರ್ಶ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.ಘಟನೆ ನಡೆದ ಸ್ಥಳಕ್ಕೆ ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿಗಳಾದ ಸಿ. ಮಲ್ಲಿಕ್, ಎಲ್. ನಾಗೇಶ್, ಡಿವೈಎಸ್ಪಿ ಕರೀಂ ರಾವೂತರ್, ಇನ್ಸ್ ಪೆಕ್ಟರ್ ಗಳಾದ ಡಾ.ಎಂ.ಎಲ್. ಶೇಖರ್, ಪ್ರಸನ್ನಕುಮಾರ್, ಶಿವನಂಜಶೆಟ್ಟಿ, ದೀಪಕ್ ಮತ್ತು ಸಿಬ್ಬಂದಿ ಶನಿವಾರ ಭೇಟಿ ಪರಿಶೀಲನೆ ನಡೆಸಿದ್ದಾರೆ.ಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ.