ಜನಿವಾರ ತೆಗೆಸಿದ ಪ್ರಕರಣ: ಹೋಮ್ ಗಾರ್ಡ್ ತಲೆದಂಡ?

| Published : Apr 19 2025, 12:36 AM IST

ಸಾರಾಂಶ

Incident of Brahmin students being banned from January at the Adichunchanagiri examination center

-ಆದಿಚುಂಚನಗಿರಿ ಪರೀಕ್ಷೆ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಘಟನೆ । ಬ್ರಾಹ್ಮಣ ಮಹಾಸಭಾದಿಂದ ಠಾಣೆಗೆ ದೂರು ದಾಖಲು

----

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಮ್ ಗಾರ್ಡ್ ಮೇಲೆ ಕ್ರಮ ಜರುಗಿಸುವ ಸಾಧ್ಯತೆ ಹೆಚ್ಚಿದೆ.

ಬುಧವಾರ ಆದಿಚುಂಚನಗಿರಿ ಪರೀಕ್ಷೆ ಕೇಂದ್ರದಲ್ಲಿ ಸಿಇಟಿ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಘಟನೆ ನಡೆದಿತ್ತು. ಈ ಘಟನೆಯನ್ನು ಬ್ರಾಹ್ಮಣ ಮಹಾಸಭಾ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಈ ಘಟನೆಯನ್ನು ಖಂಡಿಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆ ಸೆಕ್ಯೂರಿಟಿ ಗಾರ್ಡ್ ಮೇಲೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ.

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕೆಂಬ ಸೂಚನೆ ಇದ್ದರೂ ಸೆಕ್ಯೂರಿಟಿ ಗಾರ್ಡ್ ಅತಿರೇಕವಾಗಿ ವರ್ತಿಸಿದ ಹಿನ್ನಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗುವ ಸಾಧ್ಯತೆಯಿದೆ.

ಪರೀಕ್ಷೆ ನೆಪದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ ಹೇಗೆ ಎಂದು ಸಿಇಟಿ ಪರೀಕ್ಷೆ ಕೇಂದ್ರದಲ್ಲಿ ಜನಿವಾರ ತೆಗೆದ ಪ್ರಕರಣದ ವಿದ್ಯಾರ್ಥಿಯ ಸಹೋದರ ಮಾವ ಗಣೇಶ್ ಪ್ರಶ್ನಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಬಳಿ ಇರುವ ಇವರು, ತಮ್ಮ ತಂಗಿಯ ಮಗ ಕುಂದಾಪುರ ಮೂಲದ ಅಭಿಜ್ಞಾ ಸಿಇಟಿ ಪರೀಕ್ಷೆ ಬರೆಯಲು ಹೋದಾಗ ಪರೀಕ್ಷೆ ಕೇಂದ್ರದ ಸಿಬ್ಬಂದಿ ಆತನ ಜನಿವಾರ ತೆಗೆಯಲು ಹೇಳಿದರು. ಆತ ತೆಗೆಯುವುದಿಲ್ಲ ಎಂದು ಹೇಳಿದಾಗ ಪರೀಕ್ಷಾ ಕೇಂದ್ರದ ಹೊರಭಾಗ ನಿಲ್ಲಿಸಿದ್ದಾರೆ. ಅದೇ ವೇಳೆ ಇಬ್ಬರು ಬ್ರಾಹ್ಮಣ ವಿದ್ಯಾರ್ಥಿಗಳು ಜನಿವಾರ ತೆಗೆದು ಪರೀಕ್ಷೆ ಬರೆಯಲು ಒಳ ಹೋಗಿದ್ದರು. ನಂತರ ಆತ ಕೈಯಲ್ಲಿ ಕಟ್ಟಿದ್ದ ಕಾಶಿ ದಾರವನ್ನು ತೆಗೆಸಿ ಪರೀಕ್ಷೆ ಬರೆಯಲು ಒಳಗೆ ಕಳಿಸಿದ್ದಾರೆ. ಪರೀಕ್ಷಾ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಹೇಗೆ, ಇದರಿಂದ ಆತನ ಪರೀಕ್ಷೆಗೆ ತೊಂದರೆಯಾಗಿದೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

---

....ಬಾಕ್ಸ್‌...

ಜನಿವಾರ ತೆಗೆಸಿದ್ದು ಅಕ್ಷಮ್ಯ ಅಪರಾಧ: ಎಸ್‌.ದತ್ತಾತ್ರಿ

ಗಾಯತ್ರಿ ಮಂತ್ರ ಜಪಿಸಿ ದೀಕ್ಷೆ ಮೂಲಕ ಪಡೆದ ಜನಿವಾರ ತೆಗೆಸಿದ್ದು ಅಕ್ಷಮ್ಯ ಅಪರಾಧ ಎಂದು ಬ್ರಾಹ್ಮಣ ಮಹಾಸಭಾದ ಎಸ್‌.ದತ್ತಾತ್ರಿ ಹೇಳಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಜನಿವಾರವನ್ನು ಶಿವದಾರ ಹಾಗೂ ಕಾಶಿದಾರವನ್ನು ತೆಗೆಸಿದ್ದಾರೆ. ಜನಿವಾರ ತೆಗೆಯದಿದ್ದರೆ ಕತ್ತರಿಸುವುದಾಗಿ ಸಿಬ್ಬಂದಿ ಹೆದರಿಸಿದ್ದಾರೆ. ಒಂದೆರಡು ವಿದ್ಯಾರ್ಥಿಗಳ ಶಿವದಾರ ಮತ್ತು ಜನಿವಾರಕ್ಕೆ ಕತ್ತರಿ ಹಾಕಿದ್ದಾರೆ. ಇದು ಹಿಂದುಗಳ ಧಾರ್ಮಿಕ ಭಾವನೆಯನ್ನು ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬ್ರಾಹ್ಮಣ ಸಮಾಜದ ಕ್ಷಮೆಯನ್ನು ಯಾಚಿಸಬೇಕು ಎಂದು ಆಗ್ರಹಿಸಿದರು.

-------------------

....ಬಾಕ್ಸ್‌...

ದೂರು ದಾಖಲು

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ಪ್ರಕರಣ ಸಂಬಂಧ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಶುಕ್ರವಾರ ಸಂಜೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಿವಮೊಗ್ಗದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿದ ಹಿನ್ನೆಲೆ ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್ ನೇತೃತ್ವದಲ್ಲಿ ದೂರು ನೀಡಲಾಗಿದೆ. ಈ ವೇಳೆ ಮಾಜಿ ಶಾಸಕ ಕೆ.ವಿ.ಪ್ರಸನ್ನಕುಮಾರ, ಎಸ್‌ ದತ್ತಾತ್ರಿ, ಎಂ ಶಂಕರ್‌ ಮತ್ತಿತರರು ಇದ್ದರು.