ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಪೇಶ್ವಗಳ ವಿರುದ್ಧ ಯುದ್ಧ ಗೆದ್ದ ‘ಭೀಮ ಕೊರೇಗಾಂವ್ ವಿಜಯೋತ್ಸವ’ವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಪ್ರಗತಿಪರ ಚಿಂತಕ ಎಂ.ವಿ. ಕೃಷ್ಣ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆದ 206ನೇ ಭೀಮ ಕೊರೇಗಾಂವ್ ವಿಜಯೋತ್ಸವದಲ್ಲಿ ಮಾತನಾಡಿದರು.
ಭೀಮ್ ಕೊರೇಗಾಂವ್ ಯುದ್ಧ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೋರಾಟಕ್ಕೆ ಶಕ್ತಿ ತುಂಬಿದೆ. ಇತಿಹಾರಕಾರರು ಯುದ್ಧವನ್ನೇ ಮರೆಮಾಚಿದ್ದರು. ಡಾ. ಅಂಬೇಡ್ಕರ್‌ರವರು ಪುಸ್ತಕದಲ್ಲಿ ಯುದ್ಧದ ಬಗ್ಗೆ ಬರೆದಿರುವುದರಿಂದ ಎಲ್ಲರಿಗೂ ವಿಚಾರ ತಿಳಿಯುತ್ತಿದೆ ಎಂದರು.ಪ್ರಜಾಪ್ರಭುತ್ವ ರಾಷ್ಟ್ರ ಸಂವಿಧಾನದ ಶಕ್ತಿಯನ್ನೇ ಕುಂದಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಂವಿಧಾನದಿಂದ ಧರ್ಮ ಉಳಿಯುತ್ತದೆ ಹೊರತು ಧರ್ಮದಿಂದ ಸಂವಿಧಾನವಲ್ಲ. ಆದರೆ, ಈಚೆಗೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದರು.
ಅಂಬೇಡ್ಕರ್ ಸಂವಿಧಾನ ಬರೆದಿದ್ದರಿಂದಲೇ ಇಂದು ಮೋದಿ ಪ್ರಧಾನಿಯಾಗಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಸಾಧ್ಯವಾಗಿದೆ. ಸಂವಿಧಾನ ಪ್ರತಿಯೊಬ್ಬರನ್ನು ರಕ್ಷಿಸುತ್ತಿರುವುದರಿಂದ ಸಮರ್ಪಕ ಸಂವಿಧಾನ ಜಾರಿಯಾಗಿ ಹೋರಾಟ ನಡೆಸಬೇಕಿದೆ ಎಂದರು.ಸಂವಿಧಾನದಲ್ಲಿ ಸಮಾನತೆ, ಸ್ವತಂತ್ರ ಕೊಟ್ಟರು ಕೂಡ ಇಂದಿಗೂ ಆಸ್ಪೃಶ್ಯತೆ ತಾಂಡವವಾಡುತ್ತಿದೆ. ದಲಿತರು ಮತ್ತು ಹಿಂದುಳಿದ ಸಮುದಾಯ ಒಗ್ಗಟ್ಟಿನಿಂದ ಇದ್ದರೇ ಮಾತ್ರ ಬದುಕಲು ಸಾಧ್ಯ. ನಿರ್ಲಕ್ಷ್ಯ ವಹಿಸಿದರೇ ಮನುವಾದ ಮತ್ತೆ ಮರುಕಲಿಸಲಿದೆ ಎಂದು ಎಚ್ಚರಿಸಿದರು.
ಎನ್.ಹಲಸಹಳ್ಳಿ ಶ್ರೀ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರಸ್ವಾಮಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಭವನಗಳು ಜ್ಞಾನ ದೇಗುಲವಾಗಬೇಕು. ದಲಿತರು ಮೂಢನಂಬಿಕೆಗಳನ್ನು ಕೈಬಿಡಬೇಕು. ಸಂವಿಧಾನದ ಆಶಯಗಳು ಈಡೇರಬೇಕು, ದೇಗುಲ ಮುಂದೆ ಕ್ಯೂ ನಿಲ್ಲುವ ಬದಲು ಗ್ರಂಥಾಲಯಗಳಿಗೆ ಹೋಗಿ ಜ್ಞಾನಾರ್ಜನೆ ಬೆಳೆಸಿಕೊಂಡು ಭವಿಷತ್‌ನಲ್ಲಿ ಉತ್ತಮ ನಾಯಕನಾಗಬೇಕು ಎಂದರು.ಮಳವಳ್ಳಿ ಮೀಸಲು ಕ್ಷೇತ್ರವಾಗಿದೆ. ಉದ್ಯೋಗವನ್ನರಸಿ ಹೊರ ತಾಲೂಕು ಮತ್ತು ಜಿಲ್ಲೆಗಳಿಗೆ ಸಾವಿರಾರು ಮಂದಿ ವಲಸೆ ಹೋಗುತ್ತಿದ್ದಾರೆ. ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಇರುವುದರಿಂದ ಇಲ್ಲಿನ ಜನಪ್ರತಿನಿಧಿಗಳು ಕೈಗಾರಿಕಾ ಕೇಂದ್ರವನ್ನಾಗಿ ಪರಿವವರ್ತಿಸಬೇಕೆಂದು ಮನವಿ ಮಾಡಿದರು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಯನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು.
ಈ ವೇಳೆ ಡಿವೈಎಸ್ಪಿ ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜನಾರ್ಧನ್, ಮುಖಂಡರಾದ ಸಿ.ಮಾಧು, ರಂಗಸ್ವಾಮಿ, ಸಿದ್ದರಾಜು, ಜಯರಾಜು, ಕಿರಣ್‌ಶಂಕರ್, ಚಂದ್ರಹಾಸ್, ಮಹೇಶ್, ಮಹದೇವಯ್ಯ, ನಂಜುಂಡಸ್ವಾಮಿ, ಯತೀಶ್, ಸುರೇಶ್, ಕಾಂತರಾಜು ಸೇರಿದಂತೆ ಇತರರು ಇದ್ದರು.