ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರೈತರು ಬೆಳೆದ ಅಪಾರ ಮೊತ್ತದ ಅಡಿಕೆಯನ್ನು ಸಂಗ್ರಹಿಸಿದ್ದ ಗೋದಾಮಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಹಾಕಿರುವುದನ್ನು ಖಂಡಿಸಿ ನೂರಾರು ರೈತರು ಬುಧವಾರ ಇಲ್ಲಿನ ಕುವೆಂಪು ನಗರದಲ್ಲಿರುವ ವಾಣಿಜ್ಯ ತೆರಿಗೆಗಳ ಇಲಾಖೆ, ಸರಕು ಮತ್ತು ಸೇವಾ ತೆರಿಗೆ ಕಾರ್ಯಾಲಯದ ಎದುರು ಜಮಾಯಿಸಿದ್ದರು.ರೈತ ಸಂಘದ ಅರಕಲಗೂಡು ತಾಲೂಕು ಅಧ್ಯಕ್ಷ ಯೋಗಣ್ಣ ಮಾತನಾಡಿ, ನಾವುಗಳೆಲ್ಲಾ ಅಡಿಕೆ ಬೆಳೆಗಾರರು. ಹಸಿ ಅಡಿಕೆಯನ್ನು ತೋಟದಲ್ಲಿ ಬೆಳೆದು ಅದನ್ನೆಲ್ಲಾ ಒಂದು ಕಡೆ ಸಾಗಿಸಿ ಸುಲಿದು ಬೇಯಿಸಿ ಬಣ್ಣ ಕಟ್ಟಿ ಒಂದು ಕಡೆ ಗೋದಾಮಿನಲ್ಲಿ ಶೇಖರಣೆ ಮಾಡಿದ್ದೆವು. ಆದಾಯ ತೆರಿಗೆ ಇಲಾಖೆಯವರು ವರ್ತಕರ ಗೋದಾಮನ್ನು ಸೀಜ್ ಮಾಡಬೇಕು. ಆದರೆ ರೈತರ ಗೋದಾಮನ್ನು ಸೀಜ್ ಮಾಡಿದ್ದಾರೆ. ಅವರ ಕರ್ತವ್ಯಕ್ಕೆ ಯಾವುದೇ ಅಡ್ಡಿಪಡಿಸಿರುವುದಿಲ್ಲ. ದಾಸ್ತಾನಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಇಂದು ನಾವು ಆದಾಯ ತೆರಿಗೆ ಇಲಾಖೆ ಕಚೇರಿಗೆ ಬಂದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.ನಮ್ಮನ್ನು ಕರೆಯಿಸಿ ತನಿಖೆ ಮಾಡಲಿ. ನಾವು ದಾಖಲೆ ಕೊಡುತ್ತೇವೆ. ನೂರಾರು ಜನ ರೈತರು ತಮ್ಮ ತಮ್ಮ ಕೆಲಸ ಬಿಟ್ಟು ಆದಾಯ ಇಲಾಖೆ ಕಚೇರಿ ಬಳಿ ಬಂದಿದ್ದು, ಇಲ್ಲಿ ಕುಡಿಯುವುದಕ್ಕೂ ನೀರಿಲ್ಲ. ಇನ್ನು ಇಲ್ಲಿ ಯಾವ ವ್ಯವಸ್ಥೆಗಳು ಸರಿಯಾಗಿಲ್ಲ. ತೆರಿಗೆ ಇಲಾಖೆ ಅಧಿಕಾರಿಗಳು ಸಭೆ ಇದೆ ಎಂದು ಕಾರಣ ಹೇಳಿದ್ದು, ಬುಧವಾರ ಮಧ್ಯಾಹ್ನ ೩ ಗಂಟೆಯವರೆಗೂ ಅಧಿಕಾರಿಗಳನ್ನು ಕಾದಿದ್ದೇವೆ. ಈ ರೀತಿ ಅಧಿಕಾರಿಗಳು ಕಾಲಹರಣ ಮಾಡುವುದನ್ನು ನೋಡಿದರೆ ಇವರು ನಮ್ಮಿಂದ ಏನೋ ನಿರೀಕ್ಷೆ ಮಾಡುತ್ತಿದ್ದಾರೆ ಎನಿಸುತ್ತದೆ. ಕಾಲಹರಣ ಮಾಡಿದರೆ ನಾವುಗಳು ಪೊಲೀಸ್ ಅನುಮತಿ ಪಡೆದು ಈ ಕಚೇರಿಯನ್ನೆ ಬಂದ್ ಮಾಡಿ ನ್ಯಾಯ ಕೇಳುತ್ತೇವೆ ಎಂದು ಎಚ್ಚರಿಸಿದರು. ಅಡಿಕೆ ಬೆಳೆ ರೈತ ಇಮ್ರಾನ್ ಮಾತನಾಡಿ, ಅರಕಲಗೂಡು ಮತ್ತು ಹುಣಸೂರು ತಾಲೂಕು ರೈತರು ತಮ್ಮ ಅಡಿಕೆಯನ್ನು ನಮ್ಮಲ್ಲಿ ದಾಸ್ತಾನು ಮಾಡಿದ್ದಾರೆ. ಒಂದು ಚೀಲ ಹಸಿ ಅಡಿಕೆ ಕೊಟ್ಟರೆ ೧೨ ಕೆಜಿ ಒಣ ಅಡಿಕೆ ಕೊಡಬೇಕು. ದರ ಹೆಚ್ಚಾದಾಗ ಅದನ್ನು ವ್ಯಾಪಾರ ಮಾಡುತ್ತೇವೆ. ಒಂದು ಜಾಗದಲ್ಲಿ ಇರುವುದೇ ತಪ್ಪು ಎಂದು ಹೇಳಿ ಅಡಿಕೆ ಇರುವ ಗೋದಾಮಿಗೆ ಬೀಗ ಹಾಕಿ ಸೀಜ್ ಮಾಡಿದ್ದಾರೆ. ನಮ್ಮ ಬಳಿ ದಾಖಲೆ ಎಲ್ಲಾ ಇದ್ದು, ನಮ್ಮ ಮಾಲು ನಮಗೆ ಕೊಟ್ಟರೆ ಸಾಕು ಎಂದರು.
ಶಿವಣ್ಣ, ಇಮ್ರಾನ್ ಮಕ್ತಾರ್, ನಾಗೇಶ್, ಸಣ್ಣಯ್ಯ, ಮಂಜು, ಲೋಕೇಶ್ ಇದ್ದರು.