ಸಾರಾಂಶ
ಕೊಟ್ಟೂರು ಪಟ್ಟಣದ ಗುರುದೇವ ಇಂಟರ್‌ನ್ಯಾಷನಲ್ ಅಕಾಡೆಮಿಯ ನೂತನ ಶಾಲಾ ಕಟ್ಟಡವನ್ನು ಸಂಡೂರು ಶಾಸಕಿ ಇ.ಅನ್ನಪೂರ್ಣಾ ತುಕಾರಾಂ ಉದ್ಘಾಟಿಸಿದರು. ಕಲಿಕೆಯ ಜತೆಗೆ ವಿದ್ಯಾರ್ಥಿಗಳು ನೈತಿಕ ಮೌಲ್ಯಯುತ ನಡವಳಿಕೆ ರೂಢಿಸಿಕೊಂಡರೆ ಭವಿಷ್ಯತ್ತಿನಲ್ಲಿ ಉತ್ತಮ ನಾಯಕತ್ವ ರೂಪಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಕೊಟ್ಟೂರು: ಮೌಲ್ಯಯುತ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವತ್ತ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುರುದೇವ ವಿದ್ಯಾ ಪ್ರಸಾರ ಪರಿಷತ್‌ನಂತಹ ಸಾಧನೆ ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿದೆ ಎಂದು ಸಂಡೂರು ವಿಧಾನಸಭಾ ಸದಸ್ಯೆ ಇ. ಅನ್ನಪೂರ್ಣಾ ತುಕಾರಾಮ ಹೇಳಿದರು.
ಪಟ್ಟಣದ ಗುರುದೇವ ಇಂಟರ್‌ನ್ಯಾಷನಲ್ ಅಕಾಡೆಮಿಯ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಇದೀಗ ಎಲ್ಲ ರಂಗದಲ್ಲೂ ತೀವ್ರ ಪೈಪೋಟಿತನ ಕಂಡುಬರುತ್ತಿದೆ. ಇಂತಹ ಪೈಪೋಟಿಯನ್ನೇ ಸವಾಲಾಗಿ ಸ್ವೀಕರಿಸಿ ಗುರುದೇವ ವಿದ್ಯಾ ಪ್ರಸಾರ ಪರಿಷತ್ ಗ್ರಾಮಾಂತರ ಪ್ರದೇಶವಾದ ಕೊಟ್ಟೂರಿನಲ್ಲಿ ಅದ್ಭುತ ಸಾಧನೆ ತೋರುತ್ತ ಬಂದಿರುವುದು ಹೆಮ್ಮೆಯ ವಿಷಯ ಎಂದರು.ಕಲಿಕೆಯ ಜತೆಗೆ ವಿದ್ಯಾರ್ಥಿಗಳು ನೈತಿಕ ಮೌಲ್ಯಯುತ ನಡವಳಿಕೆ ರೂಢಿಸಿಕೊಂಡರೆ ಭವಿಷ್ಯತ್ತಿನಲ್ಲಿ ಉತ್ತಮ ನಾಯಕತ್ವ ರೂಪಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನತ್ತ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಮಾತನಾಡಿ, ಒತ್ತಡರಹಿತ ಕಲಿಕೆಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆ ಹೊರತು ಹೆಚ್ಚು ಅಂಕ ಗಳಿಸುವುದೇ ಆದ್ಯತೆ ಆಗಬಾರದು ಎಂದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಿ. ಮರಿಸ್ವಾಮಿ, ಎಂ.ಎಂ.ಜೆ. ವಸುಧಾ, ಗುರುದೇವ ಸಂಸ್ಥೆಯ ಸೌಮ್ಯಾ ರವಿತೇಜ ಮಾತನಾಡಿದರು.
ಗುರುದೇವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಿ. ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರುದೇವ ಶಾಲೆಯಲ್ಲಿ ಪಿಯುಸಿ ಮತ್ತು ಸಿಬಿಎಸ್‌ಸಿ ತರಗತಿಗಳನ್ನು ಆರಂಭಿಸಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದೇವೆ ಎಂದರು.ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಎಂ.ಜಿ. ರುದ್ರಯ್ಯ ಉಪಸ್ಥಿತರಿದ್ದರು.
ಮುಖ್ಯಗುರು ಪ್ರಕಾಶ ಕೋಡಿಹಳ್ಳಿ ಸ್ವಾಗತಿಸಿದರು. ಶಿಕ್ಷಕ ಹಾಲೇಶ ಪಿ. ವಂದಿಸಿದರು. ಪ್ರವೀಣ ಸಂಗಮ್ ಕಾರ್ಯಕ್ರಮ ನಿರೂಪಿಸಿದರು.