ಬದುಕಿನಲ್ಲಿ ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಿ: ವಚನಾನಂದ ಶ್ರೀ

| Published : Jul 21 2025, 12:00 AM IST

ಸಾರಾಂಶ

ವಿದ್ಯಾರ್ಥಿಗಳು ಓದು, ಕ್ರೀಡೆ ಎನ್ನುತ್ತಾ ನಮ್ಮ ಆಚಾರ, ವಿಚಾರಗಳನ್ನು ಬದಿಗೊತ್ತದೇ, ಸಂಸ್ಕೃತಿ, ಸಂಸ್ಕಾರ, ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನುಡಿದಿದ್ದಾರೆ.

- ಪಂಚಮಸಾಲಿ ಪೀಠದಿಂದ ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿಗಳು ಓದು, ಕ್ರೀಡೆ ಎನ್ನುತ್ತಾ ನಮ್ಮ ಆಚಾರ, ವಿಚಾರಗಳನ್ನು ಬದಿಗೊತ್ತದೇ, ಸಂಸ್ಕೃತಿ, ಸಂಸ್ಕಾರ, ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ನುಡಿದರು.

ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹರ ಸೇವಾ ಸಂಸ್ಥೆ, ಪಂಚಮಸಾಲಿ ಸಮಾಜದ ಜಿಲ್ಲಾ ಘಟಕ, ಹರಿಹರ ಪಂಚಮಸಾಲಿ ಪೀಠದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಆಧ್ಯಾತ್ಮಿಕವಾಗಿ ಶ್ರೀಮಂತರಾದಷ್ಟೂ ನಿಮ್ಮ ಜೀವನವೂ ಉನ್ನತ ಮಟ್ಟಕ್ಕೇರುತ್ತದೆ. ಶ್ರೀಮಂತವಾಗುತ್ತದೆ. ನಿತ್ಯ ಬೆಳಗ್ಗೆ ಎದ್ದು ಯೋಗ, ಧ್ಯಾನ, ಲಿಂಗಪೂಜೆ ಮಾಡಬೇಕು. ನಮ್ಮ ಸಂಸ್ಕಾರ, ಸಂಸ್ಕೃತಿ, ತತ್ವ ಪಾಲನೆ ಅನುಸರಿಸಬೇಕು. ಆಧ್ಯಾತ್ಮಿಕತೆ ಅಳವಡಿಸಿಕೊಂಡಷ್ಟೂ ಜೀವನದಲ್ಲಿ ನೆಮ್ಮದಿ, ಶಾಂತಿ, ಯಶಸ್ಸು ದೊರೆಯುತ್ತದೆ ಎಂದು ತಿಳಿಸಿದರು.

ಚಿಕ್ಕಂದಿನಲ್ಲಿ ನನಗೆ ಓದಲು, ಸಾಧನೆ ಮಾಡಲು ಯಾರೂ ತಿಳಿಸಿರಲಿಲ್ಲ. ಆದರೆ, ಸ್ವಪ್ರಯತ್ನದಿಂದ ಇಂದು 9 ದೇಶಗಳಿಗೆ ಹೋಗಿ ಯೋಗಕಲೆಯನ್ನು ಹೇಳಿಕೊಟ್ಟಿದ್ದೇನೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅಸಾಧ್ಯ ಯಾವುದೂ ಇಲ್ಲ. ಮನಸ್ಸಿಗಿಂತಲೂ ದೊಡ್ಡ ಶಕ್ತಿ ಯಾವುದೂ ಇಲ್ಲ ಎಂದರು.

ಮಕ್ಕಳಿಗೆ ಉತ್ತಮ ಬದುಕನ್ನು ಕಟ್ಟಿಕೊಡಲು ಹೆತ್ತವರು ಸಾಲ ಮಾಡಿ ಅವರನ್ನು ಓದಿಸುತ್ತಾರೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಕೊಡಿಸಲು ಹಗಲಿರುಳು ಶ್ರಮಿಸುತ್ತಾರೆ. ನೀವು ಉನ್ನತ ಹುದ್ದೆಗೆ ಏರಿದಾಗ, ಬದುಕನ್ನು ಕಟ್ಟಿಕೊಂಡಾಗ ಅದಕ್ಕೆ ಕಾರಣರಾದ ಹೆತ್ತವರನ್ನು ನಿಮ್ಮೊಂದಿಗೆ ಇಟ್ಟುಕೊಂಡು ಸಲಹಬೇಕು. ಆಗ ಮಾತ್ರ ನಿಮ್ಮ ಹೆತ್ತವರ ತ್ಯಾಗಕ್ಕೆ ನೀವು ಗೌರವ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಬದುಕಿನಲ್ಲಿ ಶಿಸ್ತು, ಸತತ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಓದಬೇಕೆಂಬ ಶಿಸ್ತನ್ನು ಮೈಗೂಡಿಸಿಕೊಂಡಾಗ ನೀವು ಉನ್ನತ ವಾದುದನ್ನು ಜೀವನದಲ್ಲಿ ಸಾಧಿಸುತ್ತೀರಿ. ಸ್ವೀವ್ ಜಾಬ್ಸ್‌, ಜುಕರ್‌ ಬರ್ಗ್‌ರಂತಹ ಸಾಧಕರು ಶಿಸ್ತು ಮತ್ತು ಸತತ ಪರಿಶ್ರಮ, ಪ್ರಯತ್ನದಿಂದಲೇ ಜೀವನದಲ್ಲಿ ಉನ್ನತ ಸಾಧನೆ ಮೆರೆದಿದ್ದಾರೆ ಎಂದು ವಚನಾನಂದ ಸ್ವಾಮೀಜಿ ವಿವರಿಸಿದರು.

ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿ ವರ್ಷವೂ ನಮ್ಮ ಸಮಾಜದಿಂದ ಪ್ರತಿಭಾ ಪುರಸ್ಕಾರ, ಸಮಾಜದ ವಧು-ವರರ ಸಮಾವೇಶ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇದರಿಂದ ಸಮಾಜ ಬಾಂಧವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದ ವಿದ್ಯಾರ್ಥಿಗಳು ಐಎಎಸ್‌, ಐಪಿಎಸ್‌, ಕೆಎಎಸ್‌ನಂತಹ ಉನ್ನತ, ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಬರೆದು, ಉನ್ನತ ಸ್ಥಾನ ಅಲಂಕರಿಸಬೇಕು ಎಂದರು.

ಶ್ರೀ ಪೀಠದ ಪ್ರಧಾನ ಧರ್ಮದರ್ಶಿ, ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಭೀಮಾಶಂಕರ ಜೋಷಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಎಂ.ಪಾಟೀಲ್, ಹರಿಹರ ಪೀಠದ ಗೌರವ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ ಇತರರು ಇದ್ದರು.

- - -

(ಕೋಟ್) ಶ್ರಾವಣ ಮಾಸದಲ್ಲಿ ಜಿಲ್ಲಾದ್ಯಂತ ಪಾದಯಾತ್ರೆ ಕೈಗೊಂಡು, ಸಮಾಜದ ಪ್ರತಿಯೊಬ್ಬರ ಮನೆಗೆ ಬರಬೇಕೆಂಬ ಸಂಕಲ್ಪ ಮಾಡಿದ್ದೇವೆ. ಬಡವ, ಶ್ರೀಮಂತ ಎನ್ನದೇ ಸಮಾಜದ ಪ್ರತಿಯೊಬ್ಬರ ಮನೆಗೂ ತೆರಳಿ, ಹರಸುವ ಇಚ್ಛೆ ಹೊಂದಿದ್ದೇವೆ. ಮುಂಚಿತವಾಗಿ ಹೆಸರು ಕೊಟ್ಟವರ ಮನೆಗೆ ಪಾದಾರ್ಪಣೆ ಮಾಡುತ್ತೇವೆ.

- ಶ್ರೀ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠ, ಹರಿಹರ

- - -

-20ಕೆಡಿವಿಜಿ3, 4.ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ಹರ ಸೇವಾ ಸಂಸ್ಥೆ, ಪಂಚಮಸಾಲಿ ಸಮಾಜ, ಹರಿಹರ ಪೀಠ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಗಾಟಿಸಲಾಯಿತು.