ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಿ.ಸಿ. ಪಾಟೀಲ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕೊಪ್ಪಳ: ಸಾಧಕರ ಸಾಧನೆಯನ್ನು ಸ್ಮರಿಸುವ ಜತೆಗೆ ಅವರ ಜೀವನದ ಆದರ್ಶಗಳನ್ನು ಪರಿಚಯಿಸುವ ವೇದಿಕೆಯೇ ದತ್ತಿ ಉಪನ್ಯಾಸ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಸಾಧಕರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಸವರಾಜ ಬಿನ್ನಾಳ ಹೇಳಿದರು.
ತಾಲೂಕಿನ ಅಳವಂಡಿ ಗ್ರಾಮದ ಶ್ರೀ ವಿವೇಕಾನಂದ ಪ್ರೌಢಶಾಲೆಯಲ್ಲಿ ಕೊಪ್ಪಳ ಜಿಲ್ಲಾ, ತಾಲೂಕು ಹಾಗೂ ಅಳವಂಡಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಬಿ.ಸಿ. ಪಾಟೀಲ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.1935ರಲ್ಲಿ ಬಿ.ಎಂ. ಶ್ರೀ. ಅವರು ದತ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬಿ.ಸಿ. ಪಾಟೀಲರು ಸಾಹಿತಿ ಹಾಗೂ ಸಂಶೋಧಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಸಾಧಕರು ಕಾಲಾನಂತರವೂ ತಮ್ಮ ಸಾಧನೆಗಳ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತಾರೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ. ಮನುಷ್ಯನ ಬದುಕು ಸುಂದರವಾಗಿರಬೇಕಾದರೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಬದುಕಿಗೆ ನಾವೇ ಸೂತ್ರಧಾರರು. ಬದುಕಿನ ದಾರಿ ತಪ್ಪಿದರೆ ಕತ್ತಲು ಆವರಿಸುತ್ತದೆ ಎಂದರು.
ಸಾಹಿತಿ ನೀಲಪ್ಪ ಹಕ್ಕಂಡಿ ಅವರು ಬಿ.ಸಿ. ಪಾಟೀಲ ಅವರ ಕುರಿತು ದತ್ತಿ ಉಪನ್ಯಾಸ ನೀಡಿ, ಪಾಟೀಲರು ಸಂಶೋಧನಾ ಕ್ಷೇತ್ರದ ತಪಸ್ವಿಯಾಗಿದ್ದರು. ಅವರ ಸಾಹಿತ್ಯ ಕೃತಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ. ವಿದ್ಯಾರ್ಥಿಗಳು ಸಾಹಿತ್ಯ ಹಾಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಲೆತಗ್ಗಿಸಿ ಪುಸ್ತಕ ಓದಿದರೆ ಸಮಾಜದಲ್ಲಿ ತಲೆ ಎತ್ತಿ ಗೌರವದಿಂದ ಬದುಕಲು ಸಾಧ್ಯ. ಯುವಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಅದನ್ನು ಸಾಧನೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ದುರ್ಬಳಕೆ ಮಾಡಿಕೊಂಡರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.ಸಾಹಿತಿ ಯಲ್ಲಪ್ಪ ಹರ್ನಾಳಗಿ ಮಾತನಾಡಿ, ಪುಸ್ತಕಗಳು ವ್ಯಕ್ತಿಯ ಜೀವನ ರೂಪಿಸುವ ಶಕ್ತಿ ಹೊಂದಿವೆ. ಅತಿಯಾದ ಮೊಬೈಲ್ ಬಳಕೆ ಮನುಷ್ಯನನ್ನು ಆಲಸ್ಯ ಹಾಗೂ ಏಕಾಂಗಿತನದತ್ತ ಕೊಂಡೊಯ್ಯುತ್ತದೆ. ಇದು ಸಾಧನೆಯ ಹಾದಿಗೆ ಅಡ್ಡಿಯಾಗಬಹುದು. ಮಕ್ಕಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡು ಸಾಧನೆಯತ್ತ ಸಾಗಬೇಕು ಎಂದರು.
ತಾಪಂ ಮಾಜಿ ಸದಸ್ಯ ಡಾ. ಸಿದ್ದಲಿಂಗಸ್ವಾಮಿ ಇನಾಮದಾರ ಹಾಗೂ ವಕೀಲ ಗುರುಬಸವರಾಜ ಹಳ್ಳಿಕೇರಿ ಮಾತನಾಡಿದರು.ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ, ಹೋಬಳಿ ಅಧ್ಯಕ್ಷ ಸುರೇಶ ಸಂಗರಡ್ಡಿ, ಬಸವರಾಜ ತಳಕಲ್, ಅವಿನಾಶ ಪಾಟೀಲ, ರಫಿಕ್ ಬಳಿಗಾರ, ರಮೇಶ ಸುಣಗಾರ, ಸಿ.ಬಿ. ಪಾಟೀಲ, ಎಸ್.ಬಿ. ಪಾಟೀಲ, ಜುನುಸಾಬ್ ವಡ್ಡಟ್ಟಿ ಉಪಸ್ಥಿತರಿದ್ದರು.