ಸಾರಾಂಶ
ಶಿಕಾರಿಪುರ: ಪಟ್ಟಣದಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿನ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದ ಅಸಮರ್ಪಕ ವ್ಯವಸ್ಥೆಯಿಂದಾಗಿ ನಿತ್ಯ ನೂರಾರು ನಾಗರಿಕರು ದೈನಿಂದಿನ ಕೆಲಸ ಕಾರ್ಯ ಬಿಟ್ಟು ಬಂದು ವಾಪಾಸ್ ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಹಲವು ದಿನಗಳಿಂದ ನಿರಂತರವಾಗಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ಷೇತ್ರದ ಶಾಸಕರಿಗೆ ಸಮಯದ ಅಭಾವವಾಗಿದೆ ಎಂದು ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ ಕಿಡಿಕಾರಿದರು.ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದ ಅಸಮರ್ಪಕ ವ್ಯವಸ್ಥೆ ಖಂಡಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾ.ಯುವ ಕಾಂಗ್ರೆಸ್ ಸಮಿತಿ ಹಾಗೂ ಎನ್‌ಎಸ್‌ಯುಐಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹೊಸ ಆಧಾರ್ ಕಾರ್ಡ್ ಜತೆಗೆ ತಿದ್ದುಪಡಿಯ ಏಕೈಕ ಕೇಂದ್ರ ಪ್ರಧಾನ ಅಂಚೆ ಕಚೇರಿಯಲ್ಲಿ ಮಾತ್ರವಿದ್ದು, ತಾಲೂಕು ಕಚೇರಿ, ನಾಡ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್‌ನಲ್ಲಿನ ಕೇಂದ್ರಗಳನ್ನು ಏಕಾಏಕಿ ಮುಚ್ಚಲಾಗಿದೆ ಎಂದು ದೂರಿದರು.ಅಂಚೆ ಕಚೇರಿಯಲ್ಲಿ ತಿದ್ದುಪಡಿಗಾಗಿ ಸರತಿ ಸಾಲಿನಲ್ಲಿ ನಿಲ್ಲಲು ನಿತ್ಯ ಬೆಳಿಗ್ಗೆ 4ಕ್ಕೆ ಜನತೆ ತಾಲೂಕಿನ ದೂರದ ಗ್ರಾಮಗಳಿಂದ ಆಗಮಿಸುತ್ತಿದ್ದಾರೆ. ಅಂಚೆ ಕಚೇರಿ ಅಧಿಕಾರಿಗಳು ನಿತ್ಯ ಕೇವಲ 10 ಕಾರ್ಡ್ ಮಾತ್ರ ತಿದ್ದುಪಡಿ ಮಾಡುತ್ತಿದ್ದು, ಸರತಿಯಲ್ಲಿನ ಮೊದಲ 10 ಜನರಿಗೆ ಟೋಕನ್ ನೀಡಿ ಬಾಕಿಯುಳಿದವರನ್ನು ವಾಪಾಸ್ ಕಳುಹಿಸುತ್ತಿದ್ದಾರೆ ಇದರಿಂದಾಗಿ ನೂರಾರು ಜನತೆ ಜನಪ್ರತಿನಿಧಿಗಳನ್ನು ಅಧಿಕಾರಿ ವರ್ಗವನ್ನು ಶಪಿಸಿ ವಾಪಾಸ್ ಹೋಗುವಂತಾಗಿದೆ ಎಂದು ಆರೋಪಿಸಿದರು. ಶಾಲಾ ಕಾಲೇಜುಗಳಿಗೆ ಅತ್ಯಗತ್ಯವಾದ ಆಧಾರ್ ಕಾರ್ಡ್ ಪಡೆಯಲು ಹಾಗೂ ತಿದ್ದುಪಡಿಗೆ ವಿದ್ಯಾರ್ಥಿಗಳು ಶಾಲಾ ಕಾಲೇಜು ರಜೆ ಹಾಕಿ ಅಂಚೆ ಕಚೇರಿಗೆ ಧಾವಿಸುತ್ತಿದ್ದು, ಇದರಿಂದಾಗಿ ಶೈಕ್ಷಣಿಕ ಹಿನ್ನಡೆ ಅನುಭವಿಸುವ ಸಾಧ್ಯತೆ ದಟ್ಟವಾಗಿದೆ. ಕಳೆದ ಹಲವು ದಿನದಿಂದ ಸಮಸ್ಯೆ ಜೀವಂತವಾಗಿದ್ದರೂ ಇಂದಿಗೂ ಅಧಿಕಾರಿಗಳು ಹೊಸ ಕೇಂದ್ರ ತೆರೆಯುವ ಪ್ರಯತ್ನ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಜನ ಸಾಮಾನ್ಯರು, ವಿದ್ಯಾರ್ಥಿಗಳು ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹಲವರು ಅನಿವಾರ್ಯವಾಗಿ ಪರಸ್ಥಳಕ್ಕೆ ತೆರಳುತ್ತಿದ್ದು ಪರಿಸ್ಥಿತಿಯ ತೀವ್ರತೆಗೆ ಸಾಕ್ಷಿಯಾಗಿದೆ ಎಂದರು. ಸಮಸ್ಯೆ ಗಂಭೀರತೆ ಅರಿತು ಅಧಿಕಾರಿಗಳ ಮೈಚಳಿ ಬಿಡಿಸಿ ಜನಸಂಖ್ಯೆಗನುಗುಣವಾಗಿ ಕನಿಷ್ಠ 5-6 ಆಧಾರ್ ತಿದ್ದುಪಡಿ ಕೇಂದ್ರಗಳನ್ನು ಅರಂಭಿಸುವಂತೆ ತಾಕೀತು ಮಾಡಬೇಕಾದ ಶಾಸಕರು ಮಾತ್ರ ಇತ್ತ ಕಡೆ ಗಮನಹರಿಸದೆ ರಾಜ್ಯ ರಾಜಕಾರಣದಲ್ಲಿ ಸಕ್ರೀಯವಾಗಿದ್ದು, ಜನ ಸಾಮಾನ್ಯರನ್ನು ಅನಾಥರನ್ನಾಗಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೂಡಲೇ ಕ್ಷೇತ್ರದ ಶಾಸಕರು, ಸಂಸದರು ಗಮನ ಹರಿಸಿ ಜನಸಂಖ್ಯೆಗನುಗುಣವಾಗಿ ಆಧಾರ್ ತಿದ್ದುಪಡಿ ಕೇಂದ್ರ ಹೆಚ್ಚಿಸಿ ಜನಸಾಮಾನ್ಯರ ಅಲೆದಾಟ ತಪ್ಪಿಸುವಂತೆ ಅವರು ಆಗ್ರಹಿಸಿದರು.ಬಳಿಕೆ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಎನ್‌ಎಸ್‌ಯುಐ ಅಧ್ಯಕ್ಷ ಸೈಯದ್ ಹುಸೇನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯ್ಕ್, ಉಪಾಧ್ಯಕ್ಷ ಚರಣ್ ಬನ್ನೂರು, ಸುನಿಲ್, ಸಿದ್ದು ಬಳ್ಳಿಗಾವಿ ಇತರರಿದ್ದರು.