ಸಾರಾಂಶ
ಯಲ್ಲಾಪುರ: ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ, ಆಶಾಗಳ ಸೇವೆಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನ ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ ಪೂರ್ಣ ಪ್ರಮಾಣದಲ್ಲಿ ಸಿಗದೇ ಐದಾರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅಲ್ಲದೇ ಮೊಬೈಲ್ ಆಧಾರಿತ ಕೆಲಸಗಳ ಒತ್ತಡವೂ ಸೇರಿದಂತೆ ಅನೇಕ ಸಮಸ್ಯೆಗಳಿಂದ ಆಶಾಗಳು ತತ್ತರಿಸಿದ್ದಾರೆ. ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯ ಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.ಕೊರೋನಾ ಯೋಧರಾಗಿ ಸೇವೆ ಸಲ್ಲಿಸಿದ್ದಕ್ಕೆ ಆಶಾಗಳನ್ನು ಜಾಗತಿಕವಾಗಿ ವಿಶ್ವಸಂಸ್ಥೆಯೇ ಹೊಗಳಿದೆ. ಆದರೆ ಸರ್ಕಾರ ಮಾತ್ರ ಇವರ ಸಮಸ್ಯೆ ಬಗೆಹರಿಸಲು ಕಾಳಜಿ ತೋರಿಲ್ಲ.
ಕೇಂದ್ರ ಸರ್ಕಾರ ಕಳೆದ ೧೦ ವರ್ಷಗಳಿಂದಲೂ ಆಶಾಗಳ ವೇತನ ಹೆಚ್ಚಿಸಿಲ್ಲ. ಅಲ್ಲದೇ, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನೇ ಗುರಾಣಿಯನ್ನಾಗಿಸಿಕೊಂಡಿದೆ. ಆದ್ದರಿಂದ ಈಗಾಗಲೇ ಕೊಡುತ್ತಿರುವ ಕೇಂದ್ರ-ರಾಜ್ಯ ಸರ್ಕಾರಗಳ ಗೌರವಧನ ಮತ್ತು ಪ್ರೋತ್ಸಾಹಧನ ಸೇರಿಸಿ ₹ ೧೫೦೦೦ ಮಾಸಿಕ ಗೌರವಧನ ನೀಡಬೇಕು.
ಇದಕ್ಕಾಗಿ ಎಲ್ಲ ಆಶಾಗಳು ಒಗ್ಗಟ್ಟಿನಿಂದ ರಾಜಿರಹಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.ಜಿಲ್ಲಾಧ್ಯಕ್ಷೆ ಪದ್ಮ ಚಲುವಾದಿ ಮಾತನಾಡಿ, ತಮ್ಮ ಹಕ್ಕು ಪಡೆಯಲು ಆಶಾಗಳೆಲ್ಲ ಸಂಘಟಿತರಾಗುವ ಅಗತ್ಯವಿದೆ ಎಂದರು.
ಇದೇ ವೇಳೆ ತಾಲೂಕಿನ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಆಶಾ ಭಂಡಾರ್ಕರ್, ಉಪಾಧ್ಯಕ್ಷರಾಗಿ ಸುಜಾತಾ ಸಿದ್ದಿ, ಪ್ರೇಮಾ ದಿಂಡವಾರ್, ಗೀತಾ ಸಿದ್ದಿ, ಕಾರ್ಯದರ್ಶಿಯಾಗಿ ವೀಣಾ ಜಾಡರಾಮಕುಂಟೆ, ಜಂಟಿ ಕಾರ್ಯದರ್ಶಿಗಳಾಗಿ ಗೀತಾ ಹರಿಜನ, ಲಲಿತಾ ಸಿದ್ದಿ, ಸದಸ್ಯರಾಗಿ ಶಾರದಾ ದೇವಳಿ, ಶಶಿಕಲಾ ನಾಯ್ಕ, ನಾಗರತ್ನ ನಾಯ್ಕ, ಅಂಜಲಿನ ಮುಳಗುಂದಕರ, ನೇತ್ರಾವತಿ ಉಪ್ಪಾರ, ಶ್ವೇತಾ ಗೌಡ, ಶಕುಂತಲಾ ವಾಗ್ಮೋರೆ, ಗೌರಿ ಪಟ್ದಾರಿ, ಮಾಲತಿ ಮೊಗೇರ, ಸೀಮಾ ನಾಯ್ಕ ಆಯ್ಕೆಯಾದರು.