ಶಾಲಾ ಮಕ್ಕಳ ದಾಖಲಾತಿ ಹೆಚ್ಚಿಸಿ: ಶಾಸಕ ಪಾಟೀಲ್‌

| Published : Jun 12 2024, 12:36 AM IST

ಸಾರಾಂಶ

ಕುಂದಗೋಳ ತಾಲೂಕಿನ ಬಹುತೇಕ ಗ್ರಾಮದಲ್ಲಿ ಜೆಜೆಎಂ ಕಾರ್ಯ ಅಪೂರ್ಣವಾಗಿರುವ ದೂರುಗಳು ಬಂದಿವೆ. ಸಂಬಂಧಿಸಿದ ಗುತ್ತಿಗೆದಾರರು ಕ್ರಮವಹಿಸಿ ಕೆಲಸ ಪೂರ್ಣಗೊಳಿಸಲು ತಿಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಹೇಳಿದರು.

ಕುಂದಗೋಳ:

ಕಳೆದ ವರ್ಷಕ್ಕಿಂತ ಈ ವರ್ಷ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ ಆಗಬೇಕು ಹಾಗೂ ಬಿತ್ತನೆ ಆರಂಭವಾಗಿದ್ದು ಗೊಬ್ಬರ, ಬಿತ್ತನೆ ಬೀಜದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಎಂ.ಆರ್‌. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ತಾಲೂಕು ಪಂಚಾಯಿತಿಯಲ್ಲಿ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಳೆಗಾಲ ಆರಂಭವಾಗಿದೆ. ಕುಡಿಯುವ ನೀರಿನಲ್ಲಿ ಕಲಬೇರಿಕೆಯಾಗದಂತೆ ಎಚ್ಚರಿಕೆ ವಹಿಸಿ ನೀರು ಸರಬರಾಜು ಮಾಡಬೇಕು ಎಂದರು.ತಾಲೂಕಿನ ಬಹುತೇಕ ಗ್ರಾಮದಲ್ಲಿ ಜೆಜೆಎಂ ಕಾರ್ಯ ಅಪೂರ್ಣವಾಗಿರುವ ದೂರುಗಳು ಬಂದಿವೆ. ಸಂಬಂಧಿಸಿದ ಗುತ್ತಿಗೆದಾರರು ಕ್ರಮವಹಿಸಿ ಕೆಲಸ ಪೂರ್ಣಗೊಳಿಸಲು ತಿಳಿಸಬೇಕು ಎಂದು ಸೂಚಿಸಿದರು.

ಕೃಷಿ ಇಲಾಖೆ ಅಧಿಕಾರಿ ಭಾರತಿ ಮೆಣಸಿನಕಾಯಿ ಮಾತನಾಡಿ, ಈಗಾಗಲೇ 49% ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಯಾವುದೇ ರೀತಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಸಮಸ್ಯೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿ ಸುಧಾಕರ ಬಾಗೇವಾಡಿ ಮಾತನಾಡಿ, ಪಟ್ಟಣದ ಟಿವಿಎಸ್ ಶೋರೂಂನಿಂದ ಕೋರ್ಟ್‌ ಸರ್ಕಲ್‌ ವರೆಗೆ ರಸ್ತೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ತಕರಾರು ಇರುವುದರಿಂದ ಕಾಮಗಾರಿ ಮಾಡಲು ಆಗುತ್ತಿಲ್ಲ. ಗುಡಗೇರಿಯಿಂದ ಪಶುಪತಿಹಾಳ ರಸ್ತೆ ಅಭಿವೃದ್ಧಿಗೆ ರೈತರು ತಕರಾರು ತೆಗೆದಿದ್ದು ಅದು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ನಿವಾರಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಶಾರದಾ ನಾಡಗೌಡರ ಮಾತನಾಡಿ, 135 ಅಂಗನವಾಡಿ ಕೇಂದ್ರದಲ್ಲಿ 28 ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕುಂದಗೋಳ ಪಟ್ಟಣದಲ್ಲಿ ನಂ. 12ರ ಅಂಗನವಾಡಿ ಕೇಂದ್ರವನ್ನು ಹೊಸದಾಗಿ ಕಟ್ಟಲು ಅಜ್ಜನಬಾವಿಯಲ್ಲಿ ಅನುಮತಿ ನೀಡಲಾಗಿದೆ. ಆದರೆ, ತಳಪಾಯ ತೆಗೆಯುವ ವೇಳೆ ನೀರು ಹಾಗೂ ಪ್ಲಾಸ್ಟಿಕ್‌ಯುಕ್ತ ಕಸ ಬರುತ್ತಿದ್ದರಿಂದ ತೊಂದರೆಯಾಗಿದೆ. ಆದ್ದರಿಂದ ಕಟ್ಟಡ ಕಟ್ಟಲು ಬೇರೆಡೆ ಜಾಗ ಕೇಳಿದ್ದೇವೆ ಎಂದು ಹೇಳಿದರು.

ಬಿಇಒ ಸಂಜೀವಕುಮಾರ ಬೆಳವಟಗಿ ಇಲಾಖೆ ಮಾಹಿತಿ ನೀಡಿದರು. ಈ ವೇಳೆ ತಾಪಂ ಇಒ ಎಸ್‌.ಎಸ್‌. ಕಾದ್ರೋಳ್ಳಿ, ತಹಸೀಲ್ದಾರ್‌ ಎಚ್. ಪ್ರಾಣೇಶ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ ಪಂ ಪಿಡಿಒ, ಕರವೇ ತಾಲೂಕಾಧ್ಯಕ್ಷ ಕಲ್ಲಪ್ಪ ಹರಕುಣಿ ಇದ್ದರು.