ಪಿ.ಎಂ ಪೋಷಣ್ ಅಭಿಯಾನ ಯೋಜನೆಯ ಬೆನ್ನೆಲುಬಾಗಿರುವ ಲಕ್ಷಾಂತರ ಬಿಸಿಯೂಟ ಕಾರ್ಮಿಕರು ಅತ್ಯಂತ ಕನಿಷ್ಠ ಗೌರವಧನದಲ್ಲಿ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ.

ಧಾರವಾಡ:

ಬಿಸಿಯೂಟ ಕಾರ್ಮಿಕರಿಗೆ ಇಂದಿನ ಬೆಲೆಯೇರಿಕೆಗೆ ತಕ್ಕಂತೆ ಗೌರವಧನ ಹೆಚ್ಚಿಸಬೇಕೆಂದು ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ಜಿಲ್ಲಾ ಸಮಿತಿಯಿಂದ ಶನಿವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಲಾಯಿತು.

ಸಂಘಟನೆ ಜಿಲ್ಲಾಧಕ್ಷ ಗಂಗಾಧರ ಬಡಿಗೇರ ಮಾತನಾಡಿ, ಪಿ.ಎಂ ಪೋಷಣ್ ಅಭಿಯಾನ ಯೋಜನೆಯ ಬೆನ್ನೆಲುಬಾಗಿರುವ ಲಕ್ಷಾಂತರ ಬಿಸಿಯೂಟ ಕಾರ್ಮಿಕರು ಅತ್ಯಂತ ಕನಿಷ್ಠ ಗೌರವಧನದಲ್ಲಿ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಕೇಂದ್ರ-ರಾಜ್ಯ ಸರ್ಕಾರಗಳ ಶೇ 60;40 ಅನುಪಾತದಲ್ಲಿ ಅನುದಾನ ಹಂಚಿಕೆಯಿರುವ ಈ ಯೋಜನೆಯಲ್ಲಿ 15 ವರ್ಷಗಳಿಂದ ಸಂಬಳ ಏರಿಕೆ ಮಾಡಿಲ್ಲ. ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸಿಇಒ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಮತ್ತು ಪಿಎಂ ಪೋಷಣ್ ಅಭಿಯಾನದ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಈ ವೇಳೆ ಉಮಾ ಹಿರೇಮಠ, ಲಲಿತಾ ಹೊಸಮನಿ, ರೇಣುಕಾ ಕರಿಗಾರ, ಜಯಶ್ರೀ ಹುಬ್ಬಳ್ಳಿ, ಸುನಂದಾ ಹೊಂಗಲ್, ರೇಣುಕಾ ಹೂಗಾರ, ಮಂಜುಳಾ ಕಲ್ಲೇದ, ಗೌರಮ್ಮ ಗುಡ್ಡದಮನಿ, ರಾಜಮ್ಮ ಕುಂದಗೋಳ, ರತ್ನಾ ಕಮ್ಮಾರ, ರೇಷ್ಮಾ ಧಾರವಾಡ ಮತ್ತಿತರರು ಇದ್ದರು.