ಮುಂಬರುವ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆಯಲ್ಲಿನ ಬದಲಾವಣೆ ಕುತೂಹಲ ಮೂಡಿಸಿದೆ. ಈ ಹಿಂದೆ 231 ಮತಗಟ್ಟೆಗಳು ಹೊಂದಿದ್ದ ಕ್ಷೇತ್ರದಲ್ಲಿ ಇದೀಗ 8 ಹೊಸ ಮತಗಟ್ಟೆಗಳು ಸೇರ್ಪಡೆಯಾಗಿ ಒಟ್ಟು 239 ಮತಗಟ್ಟೆಗಳಾ ಗಿವೆ. ಮತಗಟ್ಟೆಗಳ ಪುನರ್ವಿಂಗಡಣೆ ಕೇವಲ ಆಡಳಿತಾತ್ಮಕ ಬದಲಾವಣೆಯಾಗಿರದೆ, ಸ್ಥಳೀಯ ರಾಜಕೀಯ ಲೆಕ್ಕಾಚಾರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಸ್ಕಿ
ಮುಂಬರುವ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆಯಲ್ಲಿನ ಬದಲಾವಣೆ ಕುತೂಹಲ ಮೂಡಿಸಿದೆ. ಈ ಹಿಂದೆ 231 ಮತಗಟ್ಟೆಗಳು ಹೊಂದಿದ್ದ ಕ್ಷೇತ್ರದಲ್ಲಿ ಇದೀಗ 8 ಹೊಸ ಮತಗಟ್ಟೆಗಳು ಸೇರ್ಪಡೆಯಾಗಿ ಒಟ್ಟು 239 ಮತಗಟ್ಟೆಗಳಾ ಗಿವೆ. ಮತಗಟ್ಟೆಗಳ ಪುನರ್ವಿಂಗಡಣೆ ಕೇವಲ ಆಡಳಿತಾತ್ಮಕ ಬದಲಾವಣೆಯಾಗಿರದೆ, ಸ್ಥಳೀಯ ರಾಜಕೀಯ ಲೆಕ್ಕಾಚಾರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಮತದಾರರ ಸಂಖ್ಯೆ, ಭೌಗೋಳಿಕ ವ್ಯಾಪ್ತಿ ಹಾಗೂ ಮತದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶ ದಿಂದ ಮತಗಟ್ಟೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಮತಗಟ್ಟೆಗಳ ಸೇರ್ಪಡೆಯಿಂದ ಮತದಾರರ ಹಂಚಿಕೆಯಲ್ಲೂ ಬದಲಾವಣೆ ಆಗಲಿದ್ದು, ಪ್ರತಿ ಬೂತ್‌ನಲ್ಲಿನ ಮತಗಳ ಸಂಖ್ಯೆಯ ಆಧಾರದ ಮೇಲೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ತಂತ್ರಗಳನ್ನು ಮರುರೂಪಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣ ವಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿವೆ.
ರಾಜಕೀಯ ಪಕ್ಷಗಳಿಗೆ ಹೆಚ್ಚಿದ ಬೂತ್‌ವಾರು ಸವಾಲು: ಮಸ್ಕಿ ಕ್ಷೇತ್ರದಲ್ಲಿ ಮತಗಟ್ಟೆಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರಮುಖ ರಾಜಕೀಯ ಪಕ್ಷಗಳಿಗೆ ಬೂತ್ ಮಟ್ಟದ ಸಂಘಟನೆ ಮತ್ತಷ್ಟು ಮಹತ್ವ ಪಡೆದುಕೊಳ್ಳಲಿದೆ. ಪ್ರತಿ ಬೂತ್‌ಗೆ ಪ್ರತ್ಯೇಕವಾಗಿ ಕಾರ್ಯಕರ್ತರ ತಂಡ ರಚನೆ, ಮತದಾರರ ಸಂಪರ್ಕ, ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಪ್ರಚಾರ ನಡೆಸುವುದು ಪಕ್ಷಗಳಿಗೆ ಅನಿವಾರ್ಯವಾಗಲಿದೆ. ಹೊಸ ಮತಗಟ್ಟೆಗಳ ಸೇರ್ಪಡೆ ಯಿಂದ ಯಾವ ಪ್ರದೇಶದಲ್ಲಿ ಯಾವ ಸಮುದಾಯ ಅಥವಾ ವರ್ಗದ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗಳ ಚುನಾವಣಾ ತಂತ್ರ ದಲ್ಲೂ ಬದಲಾವಣೆ ಸಾಧ್ಯ. ಆದರೆ, ಮತಗಟ್ಟೆಗಳ ಸಂಖ್ಯೆ ಹೆಚ್ಚಳ ಮಾತ್ರದಿಂದಲೇ ಯಾವುದೇ ಪಕ್ಷಕ್ಕೆ ನೇರ ರಾಜಕೀಯ ಲಾಭ ಅಥವಾ ನಷ್ಟವಾಗಲಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಂತಿಮ ಪರಿಣಾಮ ಮತದಾರರ ಸಂಖ್ಯೆ, ಮತದಾನದ ಪ್ರಮಾಣ ಮತ್ತು ಸ್ಥಳೀಯ ರಾಜಕೀಯ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರಲಿದೆ.‘ಬೂತ್’ ಗೆದ್ದರೆ ಕ್ಷೇತ್ರ ಗೆದ್ದಂತೆ: ಮಸ್ಕಿ ಕ್ಷೇತ್ರದಲ್ಲಿ ರಾಜಕೀಯ ಸ್ಪರ್ಧೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ 239 ಮತಗಟ್ಟೆಗಳು ಈಗ ಪಕ್ಷಗಳ ಚುನಾವಣಾ ಸಂಘಟನೆಯ ಪ್ರಮುಖ ಕೇಂದ್ರಗಳಾಗಲಿವೆ. ಅಭ್ಯರ್ಥಿಗಳ ಜನಪ್ರಿಯತೆಗಿಂತಲೂ ಬೂತ್ ಮಟ್ಟದಲ್ಲಿ ಮತದಾರರನ್ನು ತಲುಪುವ ಸಾಮರ್ಥ್ಯ ನಿರ್ಣಾಯಕ ವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ 231ರಿಂದ 239ಕ್ಕೆ ಮತಗಟ್ಟೆಗಳ ಹೆಚ್ಚಳ, ಬೂತ್ ಸಂಖ್ಯೆಯ ಬದಲಾವಣೆ ಮಸ್ಕಿ ಕ್ಷೇತ್ರದ ಚುನಾವಣಾ ಸಂಘಟನೆಗೆ ಹೊಸ ರೂಪ ನೀಡಲಿದೆಯೇ . ಈ ಬದಲಾವಣೆಯ ಹಿನ್ನೆಲೆಯಲ್ಲಿ ಮತದಾರರ ಹೊಸ ಹಂಚಿಕೆ ಹೇಗಿದೆ ಎಂಬುದು ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರಕ್ಕೆ ಪ್ರಮುಖ ಅಂಶವಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.