‘ಲಂಚ’ ಹೆಚ್ಚಳ; ಅಧಿಕಾರಿ ವರ್ಷಸ್‌ ಏಜೆಂಟ್‌ ವಾರ್‌!

| Published : Mar 06 2025, 12:30 AM IST

‘ಲಂಚ’ ಹೆಚ್ಚಳ; ಅಧಿಕಾರಿ ವರ್ಷಸ್‌ ಏಜೆಂಟ್‌ ವಾರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರ್ನಾಲ್ಕು ದಿನಗಳಿಂದ ಕಚೇರಿಯಿಂದ ದೂರ ಉಳಿದಿರುವ ಏಜೆಂಟರು (ಮಧ್ಯವರ್ತಿಗಳು) ಆರ್‌ಟಿಒ ಕಚೇರಿ ಅಧಿಕಾರಿ, ಸಿಬ್ಬಂದಿಯ ಕೈಕಾವು ಮಾಡುವ ಕಾರ್ಯದ ಹಣದ ಮೊತ್ತವನ್ನು ಏರಿಕೆ ಮಾಡಿದ ತೀರ್ಮಾನ, ಕಿರಿಕಿರಿಯನ್ನು ಖಂಡಿಸಿ ಅನಧಿಕೃತ ಮುಷ್ಕರಕ್ಕೆ ಮುಂದಾಗಿದ್ದಾರೆ.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಸಾರಿಗೆ ಪ್ರಾಧಿಕಾರ ಕಚೇರಿಯಲ್ಲಿ ದಿನನಿತ್ಯದ ಕೆಲಸ, ಕಾರ್ಯಗಳಿಗೆ ನೀಡುತ್ತಿದ್ದ ಲಂಚದ ಮೊತ್ತವನ್ನು ಹೆಚ್ಚಿಸಿದ್ದಕ್ಕೆ ಅಧಿಕಾರಿ, ಸಿಬ್ಬಂದಿ ವರ್ಗದ ವಿರುದ್ಧ ಏಜೆಂಟರು ವಿಚಿತ್ರ ವಾರ್‌ ಘೋಷಿಸಿದ್ದಾರೆ.ಕಳೆದ ಮೂರ್ನಾಲ್ಕು ದಿನಗಳಿಂದ ಕಚೇರಿಯಿಂದ ದೂರ ಉಳಿದಿರುವ ಏಜೆಂಟರು (ಮಧ್ಯವರ್ತಿಗಳು) ಆರ್‌ಟಿಒ ಕಚೇರಿ ಅಧಿಕಾರಿ, ಸಿಬ್ಬಂದಿಯ ಕೈಕಾವು ಮಾಡುವ ಕಾರ್ಯದ ಹಣದ ಮೊತ್ತವನ್ನು ಏರಿಕೆ ಮಾಡಿದ ತೀರ್ಮಾನ, ಕಿರಿಕಿರಿಯನ್ನು ಖಂಡಿಸಿ ಅನಧಿಕೃತ ಮುಷ್ಕರಕ್ಕೆ ಮುಂದಾಗಿದ್ದಾರೆ.ಏನಿದು ವಿಚಿತ್ರ ವಾರ್?: ಜಿಲ್ಲೆಯ ಏಳು ತಾಲೂಕುಗಳಿಗೆ ಒಂದೇ ಒಂದು ಪ್ರಾದೇಶಿಕ ಸಾರಿಗೆ ಕಚೇರಿಯಿದೆ. ಈ ಹಿನ್ನೆಲೆಯಲ್ಲಿ ಹೊಸ ವಾಹನಗಳ (ದ್ವಿಚಕ್ರ, ತ್ರಿ ಚಕ್ರ, ನಾಲ್ಕು ಚಕ್ರ ಮತ್ತು ಭಾರಿ ವಾಹನ) ನೋಂದಣಿ, ಚಾಲನೆ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್) ನವೀಕರಣ, ವಾಹನಗಳ ಸಾಮರ್ಥ್ಯದ ಪ್ರಮಾಣ ಪತ್ರ, ವರ್ಗಾವಣೆ ಸೇರಿದಂತೆ ಇನ್ನಿತರ ಆರ್‌ಟಿಒ ಕಚೇರಿ ಕಾರ್ಯಗಳನ್ನು ಜನ ಮಧ್ಯವರ್ತಿ ಗಳನ್ನು ಬಳಸಿಕೊಂಡೇ ಮಾಡುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 80 ರಿಂದ 100 ಜನ ಏಜೆಂಟರು ಶೇ.80 ಕ್ಕು ಹೆಚ್ಚಿನ ಪ್ರಮಾಣದಲ್ಲಿ ಕಚೇರಿ ಹಾಗೂ ಸಾರ್ವಜನಿಕರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇಷ್ಟು ದಿನ ತೆರೆಮರೆಯಲ್ಲಿಯೇ ಲಂಚದ ಕೇಳುವುದು,ಪಡೆಯುವುದನ್ನು ಅಧಿಕಾರಿ, ಸಿಬ್ಬಂದಿ ಹಾಗೂ ಏಜೆಂಟರು ನಡೆಸಿಕೊಂಡು ಬಂದಿದ್ದಾರೆ ಆದರೆ ಕಳೆದ ಕೆಲ ದಿನಗಳಿಂದ ಕಚೇರಿ ಅಧಿಕಾರಿಗಳು ಏಜೆಂಟರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಂಚ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ, ಅದಕ್ಕಾಗಿ ಏಜೆಂಟರಿಗೆ ಇಲ್ಲ ಸಲ್ಲದ ಕಿರಿಕಿರಿಯನ್ನು ಕೊಡಲು ಶುರುಮಾಡಿದ್ದರಿಂದ ರೊಚ್ಚಿಗೆದ್ದ ಏಜೆಂಟರು ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಬುದ್ಧಿಕಲಿಸುವುದಕ್ಕಾಗಿ ಕೆಲಸ-ಕಾರ್ಯಗಳಿಂದ ದೂರ ಉಳಿದು ವಿಚಿತ್ರ ವಾರ್‌ ಘೋಷಿಸಿರುವುದರಿಂದ ಎಲ್ಲ ರೀತಿಯ ಸೇವೆ ಸ್ಥಗಿತಗೊಂಡು ಕಚೇರಿ ಬಣಗುಡುತ್ತಿದೆ.

ಇನ್ನು, ಅನೇಕ ವರ್ಷಗಳಿಂದ ಆರ್‌ಟಿಒ ಕಚೇರಿಯ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಅಧಿಕಾರಿ, ಸಿಬ್ಬಂದಿ ವರ್ಗದವರು ಅನಾಗತ್ಯವಾದ ಕಿರುಕುಳ ನೀಡಲು ಶುರುಮಾಡಿದ್ದಾರೆ. ಇದರಿಂದಾಗಿ ಕಚೇರಿಗೆ ತೆರಳದೇ ಕೆಲಸಗಳನ್ನು ನಿಲ್ಲಿಸಿ ಒಂದು ರೀತಿಯಲ್ಲಿ ಅನಧಿಕೃತ ಮುಷ್ಕರವನ್ನು ನಡೆಸುತ್ತಿದ್ದೇವೆ ಎನ್ನುತ್ತಾನೆ ಹೆಸರು ಹೇಳಲು ಇಚ್ಛಿಸದ ಏಜೆಂಟ್‌ ಒಬ್ಬಾತ.

ಆರೋಪ, ಪ್ರತ್ಯಾರೋಪದ ಬಯಲು ನಾಟಕ

ಹಲವು ವರ್ಷಗಳಿಂದ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಏಜೆಂಟರೇ ಕಬಳಿಸಿಕೊಂಡಿದ್ದಾರೆ. ಇದರಿಂದಾಗಿ ನಿಯಮಗಳ ಪಾಲನೆ ಆಗುತ್ತಿಲ್ಲ, ಜನಸಾಮಾನ್ಯರಿಂದ ಹಣ ಪಡೆದು ಸೇವೆ ಒದಗಿಸುತ್ತಿದ್ದು ಅದಕ್ಕಾಗಿಯೇ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿ ವರ್ಗದವರು ಏಜೆಂಟರ ವಿರುದ್ಧ ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಇತ್ತೀಚೆಗೆ ವರ್ಗಾವಣೆಗೊಂಡ ಬಂದ ಕೆಲ ಅಧಿಕಾರಿಗಳು ವಿನಾಕಾರಣಕ್ಕೆ ಏಜೆಂಟರಿಗೆ ಕಿರುಕುಳ ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಕಚೇರಿಯವರು ಏಕಾಏಕಿ ಲಂಚದ ಹಣವನ್ನು ದುಪ್ಪಟ್ಟು ಮಾಡಿದ್ದಾರೆ ಎಂದು ಮಧ್ಯವರ್ತಿಗಳು ಪ್ರತ್ಯಾರೋಪಕ್ಕಿಳಿದಿದ್ದಾರೆ. ಒಟ್ಟಿನಲ್ಲಿ ಆರ್‌ಟಿಒ ಕಚೇರಿಯವರ ಹಾಗೂ ಮಧ್ಯವರ್ತಿಗಳ ನಡುವೆ ನಡೆಯುತ್ತಿರುವ ಶೀಥಲ ಸಮರದಿಂದಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುವಂತಾಗಿದೆ. ಏಜೆಂಟರು ಸೇವೆಯಿಂದ ದೂರ ಉಳಿದಿರುವುದರಿಂದ ಜನರು ಅವರಿಗೆ ಒಪ್ಪಿಸಿದ್ದ ಕೆಲಸಗಳು ಸಾಗದಂತಾಗಿವೆ.