ಸಾರಾಂಶ
ಸಕಲೇಶಪುರದಲ್ಲಿ ಇತಿಹಾಸ ಸೃಷ್ಟಿಸಿರುವ ಕಾಫಿ ಧಾರಣೆ ಕಂಡು ಖುದ್ದು ಕಾಫಿ ಬೆಳೆಗಾರರೇ ಈಗ ದಿಗ್ಮೂಢರಾಗಿದ್ದಾರೆ. ಹೌದು ಕಾಫಿ ಮಾರುಕಟ್ಟೆ ಇತಿಹಾಸದಲ್ಲೇ ಪ್ರಸಕ್ತ ವರ್ಷದ ಮಾರುಕಟ್ಟೆಯ ಆರಂಭದ ಬೆಲೆ ಅಧಿಕವಾಗಿದ್ದು ಮತ್ತಷ್ಟು ಬೆಲೆ ಏರಿಕೆಯಾಗುವ ಎಲ್ಲ ಲಕ್ಷಣಗಳು ದಟ್ಟವಾಗಿದೆ.
ಅರೇಬಿಕಾವನ್ನೂ ಮೀರಿಸಿದ ರೊಬಸ್ಟಾ ಕಾಫಿ । ಮಾರುಕಟ್ಟೇಯಲ್ಲೇ ಅತ್ಯಧಿಕ ಮೌಲ್ಯದ ಮೂಲಕ ಐತಿಹಾಸಿಕ ದಾಖಲೆ । 50 ಕೆಜಿಗೆ ₹11 ಸಾವಿರ ನಿಗದಿ
ವಿದ್ಯಾಕಾಂತರಾಜ್
ಕನ್ನಡಪ್ರಭ ವಾರ್ತೆ ಸಕಲೇಶಪುರಇತಿಹಾಸ ಸೃಷ್ಟಿಸಿರುವ ಕಾಫಿ ಧಾರಣೆ ಕಂಡು ಖುದ್ದು ಕಾಫಿ ಬೆಳೆಗಾರರೇ ಈಗ ದಿಗ್ಮೂಢರಾಗಿದ್ದಾರೆ. ಹೌದು ಕಾಫಿ ಮಾರುಕಟ್ಟೆ ಇತಿಹಾಸದಲ್ಲೇ ಪ್ರಸಕ್ತ ವರ್ಷದ ಮಾರುಕಟ್ಟೆಯ ಆರಂಭದ ಬೆಲೆ ಅಧಿಕವಾಗಿದ್ದು ಮತ್ತಷ್ಟು ಬೆಲೆ ಏರಿಕೆಯಾಗುವ ಎಲ್ಲ ಲಕ್ಷಣಗಳು ದಟ್ಟವಾಗಿದೆ. ಇದರಿಂದ ಬೆಳೆಗಾರರ ಹರ್ಷಕ್ಕೆ ಮಿತಿ ಇಲ್ಲದಾಗಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ೫೦ ಕೆ.ಜಿ ರೋಬಸ್ಟ್ ಚರಿ ಕಾಫಿ ಧಾರಣೆ ಯಾವುದೇ ಓಟಿ ಇಲ್ಲದೆ ೧೧ ಸಾವಿರ ರು. ಇದೆ.
ಉತ್ತಮ ಓಟಿ ಹೊಂದಿರುವ ಕಾಫಿಗೆ ಮತ್ತಷ್ಟು ದರ ಸೇರ್ಪಡೆಯಾಗುವುದರಿಂದ ಧಾರಣೆ ೧೩೦೦೦ ರು. ಬಿಕರಿಯಾಗುತ್ತಿದೆ. ರೋಬಸ್ಟ್ ಫಾರ್‍ಚಮೆಂಟ್ ಧಾರಣೆ ೨೧ ಸಾವಿರ ರು,ಗೆ ತಲುಪಿ ಮುನ್ನುಗ್ಗುತ್ತಿದ್ದರೆ, ಅರೇಬಿಕಾ ಚರಿ ಕಾಫಿ ಧಾರಣೆ ಸಹ ಯಾವುದೇ ಓಟಿ ಇಲ್ಲದೆ ೧೨ ಸಾವಿರ ರು.ದಿಂದ ಆರಂಭವಾಗಿದೆ. ಓಟಿ ಆಧಾರದಲ್ಲಿ ಮತ್ತಷ್ಟು ಬೆಲೆ ಏರುವುದರಿಂದ ೧೪ ಸಾವಿರ ರು. ಗಡಿದಾಟುತ್ತಿದೆ. ಅರೇಬಿಕಾ ಪಾರ್‍ಚಿಮೆಂಟ್ ಧಾರಣೆ ಸಹ ೨೨ ಸಾವಿರ ರು. ತಲುಪಿದೆ. ಎರಡು ವಿಧದ ಕಾಫಿ ದರದಲ್ಲಿ ನಾಗಲೋಟ ಆರಂಭಿಸಿವೆ. ಸದ್ಯ ಅರೇಬಿಕಾ ಕಾಫಿ ಕೊಯ್ಲು ತಾಲೂಕಿನಲ್ಲಿ ಶೇ.೩೦ ರಿಂದ ೪೦ರ ಪ್ರಮಾಣದಲ್ಲಿ ನಡೆದಿದೆ. ರೋಬಸ್ಟಾ ಕಾಫಿ ಕೊಯ್ಲು ಈಗ ಆರಂಭವಾಗಿದೆ. ಸದ್ಯ ಕೊಯ್ಲು ನಡೆಸಿ ಮಾರಾಟ ಮಾಡಿರುವ ಬೆಳೆಗಾರರು ಹೆಚ್ಚಿನ ಬೆಲೆ ಕೇಳಿ ಹಿಗ್ಗುತ್ತಿದ್ದಾರೆ.ಮಾರುಕಟ್ಟೆಗೆ ಬಿಡಲು ಜಿಜ್ಞಾಷೆ:
೨೦೨೩-೨೪ನೇ ಸಾಲಿನಲ್ಲಿ ಕಾಫಿ ಮಾರುಕಟ್ಟೆ ಆರಂಭವಾದ ವೇಳೆ ಐವತ್ತು ಕೆ.ಜಿ ರೊಬಸ್ಟಾ ಚರಿ ಕಾಫಿ ಧಾರಣೆ ೭೦೦೦ ರು. ಇತ್ತು. ನಂತರದ ಅವಧಿಯಲ್ಲಿ ನಿಧಾನಗತಿ ಏರಿಕೆ ಕಂಡಿದ್ದು ಮಾರುಕಟ್ಟೆ ಅಂತ್ಯದ ವೇಳೆಗೆ ೧೧ ಸಾವಿರ ರು. ತಲುಪಿತ್ತು. ಈ ಬಾರಿ ರೋಬಸ್ಟಾ ಚರಿ ಧಾರಣೆ ಮಾರುಕಟ್ಟೆ ಆರಂಭದಲ್ಲೆ ೧೧ ಸಾವಿರ ರು. ಇದೆ. ಈಗಾಗಲೇ ಕಾಫಿ ಕೊಯ್ಲು ನಡೆಸಿ ಸಂಸ್ಕರಿಸಿರುವ ಬೆಳೆಗಾರರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡಲು ಮೀನಮೇಷ ಎಣಿಸುತ್ತಿದ್ದಾರೆ.ಹಸಿರುವಾಣಿಗೆ ಕೇರಳಿಗರ ಲಗ್ಗೆ:
ಏಕಕಾಲಕ್ಕೆ ಕಾಫಿ ಕೊಯ್ಲು ಬರುವುದರಿಂದ ಕಾರ್ಮಿಕರ ಅಭಾವ ಮಿತಿ ಮೀರುವುದು ಸಾಮಾನ್ಯವಾದ ವಿಚಾರ. ಇದರಿಂದ ಕೆಲವು ಬೆಳೆಗಾರರು ತಮ್ಮ ಫಸಲನ್ನು ಗಿಡದಲ್ಲೆ ಹುಂಡಿ (ಹಸಿರುವಾಣಿ) ಲೆಕ್ಕದಲ್ಲಿ ನೀಡುವುದು ಕಳೆದ ಅರ್ಧ ದಶಕದಿಂದ ರೂಢಿಯಾಗಿದೆ. ಸಾಮಾನ್ಯವಾಗಿ ಅಪರೂಪಕ್ಕೊಬ್ಬ ಬೆಳೆಗಾರರು ಇಂತಹ ಹುಂಡಿ ಲೆಕ್ಕದಲ್ಲಿ ಫಸಲು ನೀಡಿ ಯಾವುದೇ ಶ್ರಮವಿಲ್ಲದೆ ಹಣ ಪಡೆಯುತ್ತಿದ್ದರು. ಆದರೆ, ವರ್ಷಪೂರ್ಣ ಗಿಡಗಳ ಪೋಷಿಸುವ ಬೆಳೆಗಾರರು ಕೊಯ್ಲು ನಡೆಸುವ ವೇಳೆಗೆ ಹೈರಾಣಾಗುತ್ತಿದ್ದಾರೆ. ಈ ಬಾರಿ ಕೇರಳಿಗರು ಹಸಿರುವಾಣಿಗೆ ವ್ಯವಹಾರಕ್ಕೆ ಲಗ್ಗೆ ಇಟ್ಟಿದ್ದು ಸ್ಥಳೀಯರಿಗೆ ಪೈಪೋಟಿ ನೀಡುತ್ತಿದ್ದಾರೆ.ಅರ್ಧ ದಶಕದಲ್ಲಿ ನಾಲ್ಕುಪಟ್ಟು:
ಕಾಫಿ ಧಾರಣೆ ೨೦೧೭-೧೮ನೇ ಸಾಲಿನಲ್ಲಿ ೨೯೦೦ ರು.ನಿಂದ ೩೪೦೦ ರು. ಇದ್ದರೆ ೨೦೨೪-೨೫ನೇ ಸಾಲಿನ ವೇಳೆಗೆ ೧೧ ರಿಂದ ೧೨ ಸಾವಿರ ರು.ಗೆ ತಲುಪುವ ಮೂಲಕ ದರ ನಾಲ್ಕುಪಟ್ಟು ಹೆಚ್ಚಾಗಿದೆ.ಅಂತಾರಾಷ್ಟ್ರಿಯವಾಗಿ ಕಾಫಿ ಉತ್ಪಾಧನೆ ಕಡಿಮೆ ಇರುವುದರಿಂದ ಭಾರತದ ಕಾಫಿಗೆ ಬೇಡಿಕೆ ಹೆಚ್ಚಿದೆ. ಆದ್ದರಿಂದ ಕಾಫಿಗೆ ಉತ್ತಮ ದರ ಬಂದಿದೆ. ಧರ್ಮರಾಜ್. ಹೊಂಕರವಳ್ಳಿ. ಪ್ರಗತಿಪರ ಬೆಳೆಗಾರ. ಕಾಫಿ ವ್ಯಾಪಾರಗಾರ.
ಸಂಕಷ್ಟದ ಮಧ್ಯೆ ನಲುಗುತ್ತಿದ್ದ ಬೆಳೆಗಾರರಿಗೆ ಕಳೆದ ವರ್ಷದಿಂದ ದೊರಕುತ್ತಿರುವ ಕಾಫಿ ಬೆಲೆ ನೆಮ್ಮದಿ ತಂದಿದೆ. ಗಿರೀಶ್. ಮದನಪುರ. ಬೆಳೆಗಾರ.