ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಸಿದಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ದಿ ಕಣ್ಣಿಗೆ ಕಾಣುತ್ತಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ನಡೆದಿರುವ ಕಾರ್ಯಕ್ರಗಳನ್ನೇ ನಾನು ಮಾಡಿದ್ದೇನೆಂದು ಶಾಸಕರು ಹೇಳುತ್ತಿದ್ದಾರೆಂದು ದೂರಿದರು.
ಅಧಿಕಾರಿಗಳನ್ನು ನಿಂದಿಸುವವರನ್ನು ಸುಮೊಟೋ ಕೇಸು ದಾಖಲಿಸಿ ಎಂದು ಶಾಸಕರು ಹೇಳಿಕೆ ನೀಡಿದ ನಂತರ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವುದಕ್ಕೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವುದು ಸಾಕ್ಷಿಯಾಗಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸದೇ ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂದು ಟೀಕಿಸಿದರು. ಸಿಎಸ್‌ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕರು ಹೇಳುತ್ತಾರೆ. ಆದರೆ, ತಾಲೂಕಿನಲ್ಲಿ 40 ಶಾಲೆಗಳು ಮಕ್ಕಳಿಲ್ಲದೇ ಮುಚ್ಚಿವೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರಲು ಪ್ರಯತ್ನ ಮಾಡಿಲ್ಲ ಎಂದು ದೂರಿದರು.ನನ್ನ ಅಧಿಕಾರದ ಅವಧಿಯಲ್ಲಿ ತಾಲೂಕು ಆಸ್ಪತ್ರೆ ಅಭಿವೃದ್ಧಿ, ನಾಲಾ ಆಧುನೀಕರಣ, ಏತನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಗಳನ್ನು ಕೈಗೊಳ್ಳಲಾಗಿತ್ತು. 2023ರ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿದರು.
ಪೊಲೀಸರು ಶಾಸಕರ ಬೆಂಗಾವಲಾಗಿ ಕೆಲಸ ಮಾಡುತ್ತಿದ್ದಾರೆ ಹೊರತು ಕಾನೂನು ಸುವ್ಯವಸ್ಥೆಗೆ ಸರಿಯಾಗಿ ಮಾಡುತ್ತಿಲ್ಲ. ಇದರಿಂದ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಯಾವಾಗ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿ ಎಂದು ಶಾಸಕರನ್ನು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂತರಾಜು, ಹನುಮಂತು, ಶ್ರೀಧರ್, ಪ್ರಭು, ಮೆಹಬೂಬ್ ಪಾಷಾ ಸೇರಿದಂತೆ ಇತರರು ಇದ್ದರು.