ಸಾರಾಂಶ
ವಿಶೇಷ ವರದಿ ಹುಬ್ಬಳ್ಳಿ
ಐದು ವರ್ಷದ ಹಿಂದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೋನಾ ಮತ್ತೆ ರಾಜ್ಯದಲ್ಲಿ ಕಂಡು ಬಂದಿರುವುದು ನಾಗರಿಕರಲ್ಲಿ ಆತಂಕವನ್ನುಂಟು ಮಾಡಿದೆ.ಸರ್ಕಾರ ಕೂಡ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆಯನ್ನೂ ನೀಡಿದೆ. ಈ ನಡುವೆ ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಹೆಸರು ಪಡೆದಿರುವ ಕೆಎಂಸಿಆರ್‌ಐನಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜತೆಗೆ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತೆ ಕೈಗೊಳ್ಳಬೇಕು ಎಂಬ ಸಲಹೆ ವೈದ್ಯರು ನೀಡುತ್ತಾರೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ 36 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಉಸಿರಾಟದ ತೊಂದರೆ ಮತ್ತು ಸಾರಿ ಕೇಸ್‌ಗಳು ಬಂದರೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ತಪಾಸಣೆಗೆ ಮಾಡುವಂತೆ ಸೂಚನೆಯನ್ನು ಈಗಾಗಲೇ ನೀಡಿದ್ದು ಇದೆ. ಇದಕ್ಕೆ ತಕ್ಕಂತೆ ಜಿಲ್ಲಾಡಳಿತ ಅಗತ್ಯಬಿದ್ದರೆ ಆರ್‌ಟಿಪಿಸಿಆರ್ ತಪಾಸಣೆಗೆ ಕೈಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಈವರೆಗೂ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಆದರೂ ಮುಂಜಾಗ್ರತೆಯನ್ನು ಕೆಎಂಸಿಆರ್‌ಐನಲ್ಲಿ ಕೈಗೊಳ್ಳಲಾಗುತ್ತಿದೆ.ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರಿ ಹಾಗೂ ಉಸಿರಾಟದ ಸಮಸ್ಯೆ ಇರುವ ರೋಗಿಗಳು ಕಂಡು ಬಂದರೆ ಅವರನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ.
ಇದೇ ಕೋವಿಡ್‌ನಿಂದ ತನ್ನ ಇಮೇಜ್‌ನ್ನೇ ಬದಲಿಸಿಕೊಂಡ ಕೆಎಂಸಿಆರ್‌ಐನಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಸುತ್ತಮುತ್ತಲಿನ ಎಂಟ್ಹತ್ತು ಜಿಲ್ಲೆಗಳಿಗೆ ಕೆಎಂಸಿಆರ್‌ಐ ಆಧಾರ. ಯಾವುದೇ ಜಿಲ್ಲಾಸ್ಪತ್ರೆಗಳಿದ್ದರೂ ಕೆಎಂಸಿಆರ್‌ಐಗೆ ಕಳುಹಿಸಿ ಕೈತೊಳೆದುಕೊಳ್ಳುತ್ತವೆ. ಅದಕ್ಕೆ ತಕ್ಕಂತೆ ಕೆಎಂಸಿಆರ್‌ಐನಲ್ಲಿ ಉತ್ತಮ ಚಿಕಿತ್ಸೆಯೂ ಸಿಗುತ್ತದೆ. ಈ ಕಾರಣದಿಂದಲೇ ಕೊರೋನಾದಿಂದ ಕೆಎಂಸಿಆರ್‌ಐನ ಇಮೇಜ್ ಬದಲಾಯಿತು. ಇದೀಗ ಮತ್ತೆ ಕೊರೋನಾ ಕಾಣಿಸುತ್ತಿದೆ ಎಂಬ ಕಾರಣಕ್ಕೆ ಅದಕ್ಕೆ ಬೇಕಾದ ತಯಾರಿ ಕೆಎಂಸಿಆರ್‌ಐ ಮಾಡಿಕೊಳ್ಳುತ್ತಿದೆ.ಉತ್ತರ ಕರ್ನಾಟಕದಲ್ಲೇ ಕೆಎಂಸಿಆರ್‌ಐ ಅತಿ ದೊಡ್ಡ ಆಸ್ಪತ್ರೆ. ಬರೋಬ್ಬರಿ 2404 ಬೆಡ್‌ಗಳುಳ್ಳ ಆಸ್ಪತ್ರೆಯಿದು. ಎಲ್ಲ ಬೆಡ್‌ಗಳಿಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. 10 ಬೆಡ್‌ಗಳ ಐಸೋಲೇಷನ್ ಮಾಡಿಕೊಳ್ಳಲು ಸಿದ್ಧತೆ ಕೆಎಂಸಿಆರ್‌ಐ ಮಾಡಿಕೊಳ್ಳುತ್ತಿದೆ.
ಕೆಎಂಸಿಆರ್‌ಐನಲ್ಲೂ ಸಂಶಯ ಬಂದಂತಹ ಪ್ರಕರಣಗಳನ್ನು ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸುತ್ತವೆ.ಇನ್ನು ಜಿಲ್ಲಾಸ್ಪತ್ರೆಯಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ಜಿಲ್ಲಾದ್ಯಂತ ಎಲ್ಲ ತಾಲೂಕಾಸ್ಪತ್ರೆಗಳಿಗೂ ಸೂಚನೆ ನೀಡಲಾಗಿದ್ದು, ಸಾರಿ ಮತ್ತು ಉಸಿರಾಟದ ತೊಂದರೆಯ ಕೇಸ್‌ಗಳು ಬಂದರೆ ಆರ್‌ಟಿಪಿಸಿಆರ್ ತಪಾಸಣೆಗೊಳಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸುತ್ತದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕೆಎಂಸಿಆರ್‌ಐ ಸೇರಿದಂತೆ ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿರುವುದಂತೂ ಸತ್ಯ.ಕೆಎಂಸಿಆರ್‌ಐನಲ್ಲಿ ಸಂಶಯ ಬಂದಂತಹ ಪ್ರಕರಣಗಳನ್ನು ಆರ್‌ಟಿಪಿಸಿಆರ್ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. ಜತೆಗೆ ಕೆಎಂಸಿಆರ್‌ಐನಲ್ಲಿರುವ ಎಲ್ಲ ಬೆಡ್‌ಗಳಿಗೂ ಆಕ್ಸಿಜನ್ ಅಳವಡಿಸಲು ಅವಕಾಶವಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಕೊಂಚ ಜಾಗ್ರತರಾಗಿರಬೇಕು ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದರು.
ಸರ್ಕಾರ ಉಸಿರಾಟದ ತೊಂದರೆ ಹಾಗೂ ಸಾರಿ ಕೇಸ್ ಕಂಡು ಬಂದರೆ ಕೋವಿಡ್ ಟೆಸ್ಟ್ ಮಾಡುವಂತೆ ಸೂಚನೆ ನೀಡಿದೆ. ಅದರಂತೆ ನಾವು ಕ್ರಮ ಕೈಗೊಂಡಿದ್ದೇವೆ. ಜತೆಗೆ ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಡಿಎಚ್‌ಒ ಡಾ. ಎಸ್.ಎಂ.ಹೊನ್ನಕೇರಿ ತಿಳಿಸಿದ್ದಾರೆ.