ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡಿಗರಲ್ಲಿಯೇ ಇಂಗ್ಲಿಷ್ ವ್ಯಾಮೋಹ ಹೆಚ್ಚಳದಿಂದ ಕನ್ನಡ ಭಾಷೆ ಉಳಿಸುವವರು ಯಾರು ಎಂಬ ಪ್ರಶ್ನೆ ಎದುರಾಗುತ್ತಿದೆ ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಆತಂಕ ವ್ಯಕ್ತಪಡಿಸಿದರು.ನಗರದ ಅನ್ನಪೂರ್ಣೇಶ್ವರಿ ನಗರ 2ನೇ ಹಂತದ 11ನೇ ಕ್ರಾಸ್‌ನಲ್ಲಿ ಜೈ ಕರ್ನಾಟಕ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚಿಂತನಾ ಲಹರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿಯಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಬಹುತೇಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ವಿದ್ಯಾಭ್ಯಾಸದ ನಂತರ ದೊಡ್ಡ ಬದುಕು ಸಾಗಿಸಲು ಇಂಗ್ಲಿಷ್ ಭಾಷೆ ಅನಿವಾರ್ಯವಾಗುತ್ತಿದೆ ಎಂದರು.2500 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ರಾಜನಾಗಿ ಮೆರೆಯುತ್ತಿದೆ. ನಾಡಿನ ಉದ್ದಗಲಕ್ಕೆ ಭಾಷೆಯನ್ನು ಹರಡವಲ್ಲಿ ಕವಿ, ಸಾಹಿತಿಗಳನ್ನು ನೆನಪು ಮಾಡಿಕೊಳ್ಳಬೇಕು. ಮುಂದಿನ ಎರಡು ಮೂರು ತಲೆಮಾರುಗಳ ನಂತರ ಕನ್ನಡವನ್ನು ಉಳಿಸುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಈ ಹಿಂದೆ ಹಿರಿಯರು ರಾಮಾಯಣ, ಮಹಾಭಾರತ ಇನ್ನಿತರೆ ಕಥೆಗಳನ್ನು ಹೇಳಿಕೊಡುವ ಮೂಲಕ ಮಾತೃ ಭಾಷಾ ಪ್ರೇಮ, ಸಂಸ್ಕೃತಿಯನ್ನು ತುಂಬುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಕನ್ನಡ ಮಾತನಾಡುವುದು ಕಡಿಮೆ ಮಾಡುತ್ತಿದ್ದೇವೆ ಎಂದು ವಿಷಾದಿಸಿದರು.ಲಯನ್ಸ್ ಅಧ್ಯಕ್ಷ ಕೆ.ಟಿ.ಹನುಮಂತು ಬದುಕು ಸಾರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಂಘಟನೆಗಳು ಇಲ್ಲದಿದ್ದರೆ ಕನ್ನಡ ಭಾಷೆ ಬಳಕೆ, ಉಳಿವು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ರಾಜ್ಯೋತ್ಸವ ಒಂದು ದಿನದ ಆಚರಿಸದೆ ಪ್ರತಿಯೊಬ್ಬರೂ ಕನ್ನಡ ಉಳಿಸಿ, ಬೆಳೆಸಲು ನಿರಂತರವಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಂಘಟನೆ ವತಿಯಿಂದ ನಡೆದ ಕನ್ನಡ ವ್ಯಾಕರಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಭಾಷಣ ಸ್ಪರ್ಧೆವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಬಡಾವಣೆ ಮಹಿಳೆಯರು ತಮ್ಮ ಮನೆ ಎದುರು ಬಿಡಿಸಿದ್ದ ರಂಗೋಲಿ ಗಮನ ಸೆಳೆದವು. ಕನ್ನಡ ವ್ಯಾಕರಣ ಸ್ಪರ್ಧೆಯಲ್ಲಿ ಯುತ ಎ,, ನೈದಿಲೆ, ಹರ್ಷಿತ್ ಬಹುಮಾನ ಪಡೆದುಕೊಂಡರು. ಗ್ರಾಪಂ ಸದಸ್ಯ ಲೋಕೇಶ್, ಸಂಘಟನೆಯ ಮುಖಂಡರಾದ ಸಾದಿಕ್ ಅಹಮ್ಮದ್, ನವೀನ್, ನರಸಿಂಹ, ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.